6 ತಿಂಗಳ ಹಿಂದೆ ನೇಣಿಗೆ ಶರಣಾದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಹುಳಿಮಾವು ಅಕ್ಷಯ ನಗರದ ಚಿಕನ್ ಕೌಂಟಿ ಹಿಂಭಾಗದಲ್ಲಿ 6 ತಿಂಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹವೊಂದು (Dead Body) ಪತ್ತೆಯಾಗಿದೆ.
ವ್ಯಕ್ತಿಯೊಬ್ಬರು ಕೊಟ್ಟ ಮಾಹಿತಿ ಆಧಾರದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರೇ ಆ ದೃಶ್ಯವನ್ನು ನೋಡಿ ಆಘಾತಕ್ಕೊಳಗಾಗಿದ್ದರು. ಏಕೆಂದರೆ ಬೆಂಗಳೂರಿನಂತಹ ಜನನಿಬಿಡ ಮಹಾನಗರದಲ್ಲಿ ಈ ರೀತಿ ಮೃತದೇಹವೊಂದು ಅಸ್ತಿಪಂಜರದ ರೂಪದಲ್ಲಿ ನೇಣಿಗೆ ಶರಣಾದ ಸ್ಥಿತಿಯಲ್ಲಿ ಇಷ್ಟೊಂದು ತಡವಾಗಿ ಪತ್ತೆಯಾಗಿದ್ದರಿಂದ ಪೊಲೀಸರಿಗೂ ಎದೆಬಡಿತ ಹೆಚ್ಚಾಗುವಂತೆ ಮಾಡಿತ್ತು.
ಘಟನೆ ಜಾಡು ಹಿಡಿದ ಪೊಲೀಸರು:
ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು ಇದು ಸುಮಾರು 6-7 ತಿಂಗಳುಗಳ ಹಿಂದೆ ನಡೆದಿರುವ ಘಟನೆ ಎಂದು ಅಂದಾಜಿಸಿದ್ದಾರೆ. ಸ್ಥಳದಲ್ಲಿರುವ ಕೆಲ ಸಾಕ್ಷ್ಯಗಳ ಅಧಾರದ ಮೇಲೆ ತನಿಖೆ ಪ್ರಾರಂಭಿಸಿರುವ ಪೊಲೀಸರಿಗೆ ಇದು ಮಹಿಳೆಯಾ? ಯುವತಿಯಾ? ಇದು ಆತ್ಮಹತ್ಯೆನಾ? ಅಥವಾ ಕೊಲೆಯಾ? ಎನ್ನುವುದರ ಬೆನ್ನು ಬಿದ್ದಿದ್ದಾರೆ.
ಬಳಿಕ ನಗರದಲ್ಲಿ ಕಳೆದ 6 ತಿಂಗಳಲ್ಲಿ ಕಾಣೆಯಾದವರ ದೂರಿನ ಪಟ್ಟಿಯನ್ನು ಜಾಲಾಡಿದ್ದಾರೆ. ಮರದಲ್ಲಿ ನೇತಾಡುತ್ತಿದ್ದ ಅಸ್ಥಿಪಂಜರದ ಮೂಳೆಯ ಡಿಎನ್ಎ ಸ್ಯಾಂಪಲ್ ಅನ್ನು ಎಫ್ಎಸ್ಎಲ್ಗೆ ಕಳುಹಿಸಿದ್ದಾರೆ.
ಒಂದೇ ದಿನದಲ್ಲಿ ರಹಸ್ಯ ಬಯಲು:
ನಾಪತ್ತೆ ದೂರುಗಳ ಪಟ್ಟಿಯನ್ನು ಪೊಲೀಸರು ಹೊರ ತೆಗೆದಾಗ ಕಳೆದ ವರ್ಷ ಜುಲೈನಲ್ಲಿ ಹುಳಿಮಾವು ಠಾಣೆಯಲ್ಲಿ ನೇಪಾಳಿ ಮಹಿಳೆ (Woman) ನಾಪತ್ತೆ ಕೇಸ್ ದಾಖಲಾಗಿರುವುದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಸಿಕ್ಕ ವಸ್ತುಗಳನ್ನೆಲ್ಲಾ ಹೋಲಿಕೆ ಮಾಡಿ ನೋಡಿದಾಗ ಇದು ಅದೇ ಮಹಿಳೆಯ ಶವ ಎಂಬುದು ತಿಳಿದುಬಂದಿದೆ.
ನೇಪಾಳ ಮೂಲದ ಮಹಿಳೆ ಪುಷ್ಪದಾಮಿ ನೇಣಿಗೆ ಶರಣಾಗಿರುವ ಮಹಿಳೆ ಎಂಬುದು ತಿಳಿದುಬಂದಿದೆ. ಕುಟುಂಬ ಕಲಹದ ಹಿನ್ನೆಲೆ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಮೂಡಿದೆ. ಆಕೆಯ ಮೃತದೇಹ ಪತ್ತೆಯಾಗಿರುವ ಸ್ಥಳದಲ್ಲಿ ಚಪ್ಪಲಿ, ನೆಕ್ಲೆಸ್ ಹಾಗೂ ಇತರ ಕೆಲವು ವಸ್ತುಗಳೂ ಪತ್ತೆಯಾಗಿದೆ ಎಂದು ಅಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ ಹೇಳಿದ್ದಾರೆ.
6 ತಿಂಗಳ ಹಿಂದೆ ಮಹಿಳೆ ನೇಣಿಗೆ ಶರಣಾಗಿದ್ದರೂ ಇದು ಯಾರ ಕಣ್ಣಿಗೂ ಕಾಣಿಸಲಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ಈ ಪ್ರದೇಶದಲ್ಲಿ ದನ-ಕರು ಮೇಯಿಸಲು, ಕ್ರಿಕೆಟ್ ಆಡಲು ಜನರು ಬರುತ್ತಿರುತ್ತಾರೆ. ಜನನಿಬಿಡ ಜಾಗವಾಗಿದ್ದರೂ ಇಷ್ಟು ದಿನ ಏಕೆ ಯಾರ ಕಣ್ಣಿಗೂ ಬಿದ್ದಿರಲಿಲ್ಲ ಎಂದು ಪೊಲೀಸರು ಅಚ್ಚರಿಪಟ್ಟಿದ್ದಾರೆ.