ಡೈರೆಕ್ಷನ್ ಮಾಡಲು ನಟಿ ಶ್ರುತಿ ಹರಿಹರನ್ ಸಿದ್ಧತೆ

ಲೂಸಿಯಾ (Lucia) ಮೂಲಕ ನಾಯಕಿಯಾಗಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿರುವ ನಟಿ ಶ್ರುತಿ ಹರಿಹರನ್ (Shruti Hariharan), ನಿರ್ದೇಶನಕ್ಕೂ (Director) ಮುಂದಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ತಾಯಿಯಾದ ನಂತರ ಸಿನಿಮಾ ರಂಗದಿಂದ ದೂರವಾಗಿದ್ದ ಶ್ರುತಿ, ಇದೀಗ ಮತ್ತೆ ಸಕ್ರೀಯರಾಗಿದ್ದಾರೆ. ಮೂರು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಸದ್ಯದಲ್ಲೇ ಅವರು ಸಿನಿಮಾವೊಂದನ್ನು ನಿರ್ದೇಶನ ಮಾಡಲಿದ್ದಾರಂತೆ.
ಸ್ಟ್ರಾಬೆರಿ, ಈಗ ಮತ್ತು ಸಾರಾಂಶ ಸಿನಿಮಾಗಳಲ್ಲಿ ಮಹತ್ವದ ಪತ್ರಗಳನ್ನು ಮಾಡುತ್ತಿರುವ ಶ್ರುತಿ ಹರಿಹರನ್ ಮುಂದಿನ ದಿನಗಳಲ್ಲಿ ನಿರ್ದೇಶನವನ್ನೂ ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲೇ ಅವರೇ ಹೆಚ್ಚಿನ ಮಾಹಿತಿಯನ್ನೂ ನೀಡಲಿದ್ದಾರೆ. ಈ ಮೂಲಕ ನಟಿಯೊಬ್ಬರು ನಿರ್ದೇಶನಕ್ಕೆ ಇಳಿದ ಯಾದಿಗೆ ಅವರು ಸೇರ್ಪಡೆಯಾಗಲಿದ್ದಾರೆ. ಸಂಪೂರ್ಣ ತಯಾರಿಯೊಂದಿಗೆ ಅಖಾಡಕ್ಕೆ ಇಳಿಯುವ ಮಾತುಗಳನ್ನೂ ಅವರು ಆಡಿದ್ದಾರೆ.
ಕನ್ನಡ ಸಿನಿಮಾ ರಂಗಕಂಡ ಪ್ರತಿಭಾವಂತೆ ಶ್ರುತಿ ಹರಿಹರನ್, ಸಿನಿಮಾ ರಂಗದ ಯಾವುದೇ ಹಿನ್ನೆಲೆ ಇಲ್ಲದೇ, ವಿಭಿನ್ನ ಎನಿಸುವಂತಹ ಚಿತ್ರಗಳಲ್ಲಿ ನಟಿಸಿದವರು. ನಾತಿಚರಾಮಿ ಸಿನಿಮಾದ ನಟನೆಗಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಅವರು ಪಡೆದವರು. ಅಲ್ಲದೇ, ಕನ್ನಡ ಸಿನಿಮಾ ರಂಗದ ಹೆಸರಾಂತ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಕನ್ನಡದಲ್ಲಿ ಮಾತ್ರವಲ್ಲ, ಇತರ ಭಾಷೆಗಳ ಚಿತ್ರದಲ್ಲೂ ಅವರು ನಟಿಸಿದ್ದಾರೆ. ವ್ಯಾಪಾರಿ ಮತ್ತು ಕಲಾತ್ಮಕ ಚಿತ್ರಗಳ ಮೂಲಕ ಗುರುತಿಸಿಕೊಂಡ ಪ್ರತಿಭಾನ್ವಿತ ನಟಿ ಕೂಡ ಇವರಾಗಿದ್ದಾರೆ.
ನಟಿಯಾಗಿ ಸಾಕಷ್ಟು ಹೆಸರು ಮಾಡಿರುವ ಶ್ರುತಿ ಹರಿಹರನ್, ಇದೀಗ ನಿರ್ದೇಶಕಿಯಾಗಿ ಅಭಿಮಾನಿಗಳ ಎದುರು ನಿಲ್ಲುತ್ತಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಸೂಕ್ಷ್ಮ ಕಥೆ ಮತ್ತು ಪಾತ್ರಗಳ ಮೂಲಕವೇ ಗುರುತಿಸಿಕೊಂಡವರು, ತಮ್ಮ ನಿರ್ದೇಶನದ ಸಿನಿಮಾಗೆ ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವುದು ಸದ್ಯಕ್ಕೀರುವ ಕುತೂಹಲ. ಮುಂದಿನ ದಿನಗಳಲ್ಲಿ ಈ ಕುರಿತು ಅವರೇ ಹೇಳಲಿದ್ದಾರಂತೆ. ಅಲ್ಲಿವರೆಗೂ ಕಾಯಬೇಕಿದೆ.