ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರರಿಗೆ ಶೇಕಡಾ 4 ರಷ್ಟು ತುಟ್ಟಿಭತ್ಯೆ ಹೆಚ್ಚಳ!
ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರರಿಗೆ ಶೇಕಡಾ 4 ರಷ್ಟು ತುಟ್ಟಿಭತ್ಯೆ (ಡಿಎ) ಮತ್ತು ಡಿಯರ್‌ನೆಸ್ ರಿಲೀಫ್ (ಡಿಆರ್) ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ.
ಈ ನಿರ್ಧಾರದಿಂದ ಕೇಂದ್ರ ಸರ್ಕಾರಿ ನೌಕರರ ಡಿಎ ಈಗಿರುವ ಶೇ. 42ರಿಂದ ಶೇ. 46ಕ್ಕೆ ಏರಿಕೆಯಾಗಲಿದೆ. ಅನುಮೋದಿತ ಡಿಎ ಹೆಚ್ಚಳವು ಜುಲೈ 1, 2023 ರಿಂದ ಪೂರ್ವಾನ್ವಯವಾಗಲಿದೆ.
ಬಹುನಿರೀಕ್ಷಿತ ನಿರ್ಧಾರವು ಹಬ್ಬದ ಋತುವಿನಲ್ಲಿಯೇ ಹೊರಬಿದ್ದಿದ್ದು, ಲಕ್ಷಗಟ್ಟಲೆ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ‘ದಸರಾ ಉಡುಗೊರೆ’ ರೂಪದಲ್ಲಿ ಬಂದಿದೆ. ಈ ನಿರ್ಧಾರದಿಂದ 47 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ.
4% ಡಿಎ ಏರಿಕೆ, ಯಾರಿಗೆ ಎಷ್ಟು ಸಿಗಲಿದೆ ಹಣ?
ಕನಿಷ್ಠ ಮೂಲ ವೇತನ 18,000 ರೂ. ಹೊಂದಿದವರಿಗೆ ಪ್ರಸ್ತುತ ಶೇಕಡಾ 42ರಷ್ಟು ಡಿಎಯಿಂದ ಮಾಸಿಕ ಹೆಚ್ಚುವರಿ 7,560 ರೂ. ಆದಾಯ ಬರುತ್ತಿತ್ತು. ಇದೀಗ ಡಿಎ ಶೇ. 46ಕ್ಕೆ ಏರಿಕೆಯಾಗಿರುವುದರಿಂದ ಇವರ ಮಾಸಿಕ ವೇತನ ಹೆಚ್ಚಳವು 8,280 ರೂ.ಗೆ ಜಿಗಿಯಲಿದೆ.
ಇನ್ನು 56,900 ರೂ.ಗಳ ಗರಿಷ್ಠ ಮೂಲ ವೇತನವನ್ನು ಹೊಂದಿರುವ ವ್ಯಕ್ತಿಗಳು ಪ್ರಸ್ತುತ ಶೇ. 42ರಷ್ಟು ಡಿಎ ಲೆಕ್ಕದಲ್ಲಿ ಪ್ರತಿ ತಿಂಗಳು ತಮ್ಮ ಮಾಸಿಕ ಗಳಿಕೆಯ ಭಾಗವಾಗಿ ಹೆಚ್ಚುವರಿ 23,898 ರೂ.ಗಳನ್ನು ಸ್ವೀಕರಿಸುತ್ತಿದ್ದರು. ಇದೀಗ ಶೇ. 46ರ ಡಿಎ ಲೆಕ್ಕದಲ್ಲಿ ಈ ವ್ಯಕ್ತಿಗಳ ಮಾಸಿಕ 26,174 ರೂ. ಪಡೆಯಲಿದ್ದಾರೆ.
ಡಿಎ ಮತ್ತು ಡಿಆರ್ ಎಂದರೇನು?
ಇದಕ್ಕೆ ಸಮಾನಾಗಿ ಡಿಯರ್ನೆಸ್ ರಿಲೀಫ್ (ಡಿಆರ್) ಅನ್ನು ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ನೀಡಲಾಗುತ್ತದೆ. ಪಿಂಚಣಿದಾರರಿಗೆ ಹೆಚ್ಚುತ್ತಿರುವ ಜೀವನ ವೆಚ್ಚವನ್ನು ನಿರ್ವಹಿಸಲು ಇದು ಸಹಾಯ ಮಾಡುತ್ತದೆ. ಸರ್ಕಾರವು ಪ್ರತಿ ಆರು ತಿಂಗಳಿಗೊಮ್ಮೆ ಡಿಎ ಮತ್ತು ಡಿಆರ್ ದರಗಳನ್ನು ಪರಿಷ್ಕರಿಸುತ್ತದೆ. ಮುಂದಿನ ಪರಿಷ್ಕರಣೆ ಜನವರಿಯಿಂದ ಅನ್ವಯವಾಗಲಿದ್ದು, ಮಾರ್ಚ್ ಅಥವಾ ಏಪ್ರಿಲ್ ವೇಳೆ ಪರಿಷ್ಕರಣೆಯಾಗುವ ಸಾಧ್ಯತೆ ಇದೆ.