ಬರೋಬ್ಬರಿ 142 ಮಂದಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ; ಪ್ರಾಂಶುಪಾಲ ಅರೆಸ್ಟ್!
ಚಂಡೀಗಢ: ಬರೋಬ್ಬರಿ 142 ಮಂದಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಾಂಶುಪಾಲರನ್ನು ಬಂಧಿಸಲಾಗಿದೆ.
ಈ ಘಟನೆ ಹರಿಯಾಣದ (Hariyana) ಜಿಂದ್ ಜಿಲ್ಲೆಯ ಸರ್ಕಾರಿ ಶಾಲೆಯ ಪ್ರಿನ್ಸಿಪಲ್ ಮೇಲೆ ಈ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಇದೀಗ ಪ್ರಾಂಶುಪಾಲರನ್ನು ಬಂಧಿಸಲಾಗಿದೆ. ಆರಂಭದಲ್ಲಿ 60 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ (Sexual Harassment) ಆರೋಪ ಹೊರಿಸಿದ್ದರು. ಆದರೆ ಇದೀಗ ಅದರ ಸಂಖ್ಯೆ 142ಕ್ಕೆ ಏರಿಕೆಯಾಗಿದೆ.
ಆರೋಪವೇನು..?: 55 ವರ್ಷದ ಪ್ರಾಂಶುಪಾಲರು ಮೊದಲು ನಮ್ಮನ್ನು ಆಫೀಸಿಗೆ ಕರೆಯುತ್ತಾರೆ. ಬಳಿಕ ತಮ್ಮ ಜೊತೆ ಅಶ್ಲೀಲವಾಗಿ ನಡೆದುಕೊಳ್ಳುತ್ತಾರೆ ಎಂದು ಸಂತ್ರಸ್ತೆಯರು ದೂರಿರುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ತಿಳಿಸಿದ್ದಾರೆ.
ಹರಿಯಾಣ ಪೊಲೀಸರು ನವೆಂಬರ್ 6 ರಂದು ಪ್ರಾಂಶುಪಾಲರನ್ನು ಬಂಧಿಸಿದ್ದಾರೆ. ಹರಿಯಾಣ ರಾಜ್ಯ ಮಹಿಳಾ ಆಯೋಗವು ಪೊಲೀಸರಿಗೆ ಅಲ್ಟಿಮೇಟಮ್ ನಂತರ ಬಂಧನ ನಡೆದಿದೆ. ಜಿಂದ್ ಜಿಲ್ಲಾಧಿಕಾರಿ ಪ್ರಕರಣವನ್ನು ಖಚಿತಪಡಿಸಿದ್ದಾರೆ. ಈ ಕುರಿತು ವಿವಿಧ ಇಲಾಖೆಗಳಿಂದ ತನಿಖೆ ನಡೆಯುತ್ತಿದೆ.
ಶಾಲೆಯ ಕೆಲವು ವಿದ್ಯಾರ್ಥಿನಿಯರಿಂದ ಪ್ರಾಥಮಿಕ ದೂರನ್ನು ಹರಿಯಾಣ ರಾಜ್ಯ ಮಹಿಳಾ ಆಯೋಗವು ಸೆಪ್ಟೆಂಬರ್ 14 ರಂದು ಪೊಲೀಸರಿಗೆ ರವಾನಿಸಿತು ಆದರೆ ಅಕ್ಟೋಬರ್ 30 ರಂದು ಮಾತ್ರ ಕ್ರಮ ತೆಗೆದುಕೊಳ್ಳಲಾಯಿತು. ನಂತರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿತ್ತು. ಶಿಕ್ಷಣ ಇಲಾಖೆ ಆರೋಪಿಯನ್ನು ಅಕ್ಟೋಬರ್ 27 ರಂದು ಅಮಾನತುಗೊಳಿಸಿದೆ.
ರೈತನ ಕಾರ್ ಗ್ಲಾಸ್ ಒಡೆದು 10 ಲಕ್ಷ ರೂ. ಕಳವು – ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಚಿತ್ರದುರ್ಗ: ಕಾರಿನ (Car) ಗ್ಲಾಸ್ ಒಡೆದು ಅದರಲ್ಲಿದ್ದ 10 ಲಕ್ಷ ರೂ. ಹಣವನ್ನು ಕಳ್ಳರು ದೋಚಿದ ಘಟನೆ ಹೊಸದುರ್ಗದಲ್ಲಿ ನಡೆದಿದೆ.
ಲಕ್ಕಿಹಳ್ಳಿ ಗ್ರಾಮದ ರೈತ ಮುದ್ದಪ್ಪ ಎಂಬವರು ಬ್ಯಾಂಕ್ನಿಂದ ಹಣ ಡ್ರಾ ಮಾಡಿಕೊಂಡು ಬಂದು ಕಾರಲ್ಲಿಟ್ಟಿದ್ದರು. ಬಳಿಕ ರಸ್ತೆ ಬದಿಯಲ್ಲಿನ ಅಂಗಡಿಯೊಂದಕ್ಕೆ ತೆರಳಿದ್ದರು. ವಾಪಸ್ ಬರುವಷ್ಟರಲ್ಲಿ ಬೈಕಲ್ಲಿ ಬಂದ ಇಬ್ಬರು ಚಾಲಕಿ ಕಳ್ಳರು ಹಣದ ಬ್ಯಾಗ್ ಕಳವು ಮಾಡಿಕೊಂಡು ಪಾರಾರಿಯಾಗಿದ್ದಾರೆ.
ಕಳ್ಳರು ರೈತನ ಚಲನವಲನ ಗಮನಿಸಿಕೊಂಡು ಬಂದಿದ್ದು, ಈ ಕೃತ್ಯ ಎಸಗಿದ್ದಾರೆ. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಹಾಡಹಗಲೇ ಕಳ್ಳತನ ಆಗಿರುವುದರಿಂದ ನಗರದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಈ ಸಂಬಂಧ ಹೊಸದುರ್ಗ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.