10 ಸಾವಿರ ರೂ. ದಂಡ ಮತ್ತು ಎಫ್ಐಆರ್ ರದ್ದು ಕೋರಿ ಅರ್ಜಿ; ಸುಪ್ರೀಂಕೋರ್ಟ್ನಲ್ಲಿ ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್..!
ರಸ್ತೆ ತಡೆದು ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ವಿಧಿಸಿರುವ 10 ಸಾವಿರ ರೂ. ದಂಡವನ್ನು ಪ್ರಶ್ನಿಸಿ ಮತ್ತು ಎಫ್ಐಆರ್ ರದ್ದತಿ ಕೋರಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಕಾಂಗ್ರೆಸ್ (Congress) ನಾಯಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಡೆಸಿದೆ. ಇದೇ ವೇಳೆ, ಮುಂದಿನ ಆದೇಶದವರೆಗೆ ಸಿದ್ದರಾಮಯ್ಯ ವಿರುದ್ಧದದ ಕ್ರಿಮಿನಲ್ ವಿಚಾರಣೆಗೆ ತಡೆ ನೀಡಿ ಸುಪ್ರೀಂ ಕೋರ್ಟ್ (Supreme Court) ಆದೇಶ ನೀಡಿದೆ. ಇದರೊಂದಿಗೆ ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ನಾಯಕರು ತುಸು ನಿರಾಳರಾಗುವಂತಾಗಿದೆ. ಆದರೆ, ಆರು ವಾರಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಸೂಚನೆ ನೀಡಿದೆ.
ರಸ್ತೆ ತಡೆದು ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಎಫ್ಐಆರ್ ರದ್ದು ಮಾಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಕೆಲವು ದಿನಗಳ ಹಿಂದೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ 10 ಸಾವಿರ ರೂ. ದಂಡ ವಿಧಿಸಿರುವುದನ್ನು ಕೂಡ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಹಾಗೂ ಕಾಂಗ್ರೆಸ್ ನಾಯಕರ ಪರ ಅಭಿಷೇಕ್ ಮನುಸಿಂಘ್ವಿ ವಾದ ಮಂಡನೆ ಮಾಡಿದರು.
ಕಪಿಲ್ ಸಿಬಲ್ ವಾದ ಮಂಡನೆ ಹೀಗಿತ್ತು
ಕಾಂಗ್ರೆಸ್ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇದೊಂದು ಶಾಂತಿಯುತ ಪ್ರತಿಭಟನೆಯಾಗಿತ್ತು. ಪ್ರತಿಭಟನೆಯಿಂದ ಯಾವುದೇ ರೀತಿಯ ಸಮಸ್ಯೆಯಾಗಿರಲಿಲ್ಲ. ಇದೊಂದು ‘ರಾಜಕೀಯ ಪ್ರತಿಭಟನೆ’ಯಾಗಿತ್ತು. ಇದರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದು ಸಂವಿಧಾನದ 19(1)(ಎ) ವಿಧಿಯಡಿ ಪ್ರತಿಭಟಿಸುವ ಹಕ್ಕಿನ ಉಲ್ಲಂಘನೆಯಾಗಿದೆ. ಯಾವುದೇ ಕ್ರಿಮಿನಲ್ ಉದ್ದೇಶವಿಲ್ಲದೆ ಶಾಂತಿಯುತವಾಗಿ ನಡೆಸಿದ ರಾಜಕೀಯ ಪ್ರತಿಭಟನೆಯನ್ನು ದಂಡದ ನಿಬಂಧನೆಗಳನ್ನು ಬಳಸಿ ನಿಯಂತ್ರಿಸುವುದು ಸರಿಯಲ್ಲ ಎಂದು ಕಪಿಲ್ ಸಿಬಲ್ ವಾದ ಮಂಡನೆ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಾಜಕೀಯ ಪಕ್ಷಗಳ ಪ್ರತಿಭಟನೆ ಎಂದ ಕೂಡಲೆ ಕೇಸ್ ವಜಾ ಮಾಡಬೇಕೇ ಏಂದು ಪ್ರಶ್ನಿಸಿತು. ಜತೆಗೆ, ನೀವು ಪ್ರತಿಭಟನೆಗೆ ಅನುಮತಿ ಪಡೆದಿದಿದ್ದಿರೇ ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಸಿಬಲ್, ಪ್ರತಿಭಟಿಸುವುದು ಮೂಲಭೂತ ಹಕ್ಕು. ಪ್ರತಿಭಟಿಸುವುದು ಅಪರಾಧವಲ್ಲ ಎಂದು ವಾದ ಮಂಡಿಸಿದರು.