ಹಿರಿಯ ನಟ ಶರತ್ ಬಾಬು ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿರುವ ನಟ ಶರತ್ ಬಾಬು (Sarath Babu) ಅವರ ಆರೋಗ್ಯ ಚಿಂತಾಜನಕವಾಗಿದೆ. ಸದ್ಯ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದಾರೆ.
ʻಅಮೃತವರ್ಷಿಣಿ’ (Amruthavarshini) ಚಿತ್ರದಲ್ಲಿ ರಮೇಶ್ ಅರವಿಂದ್, ಸುಹಾಸಿನಿ ಜೊತೆ ಶರತ್ ಬಾಬು (Sarath Babu) ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 71 ವರ್ಷ ವಯಸ್ಸಿನ ಶರತ್ ಬಾಬು ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರ ಆರೋಗ್ಯದಲ್ಲಿ ಹೆಚ್ಚಿನ ಏರುಪೇರಾದ ಹಿನ್ನಲೆಯಲ್ಲಿ ಬುಧವಾರ ಚೆನ್ನೈನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕನ್ನಡ ಮಾತ್ರವಲ್ಲದೆ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಶರತ್ ಬಾಬು ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಯಾವ ಕಾಯಿಲೆಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಹೊರಬಂದಿಲ್ಲ. ಶರತ್ ಬಾಬು ಅವರನ್ನು ನೋಡಲು ಚಿತ್ರರಂಗದ ಗಣ್ಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಅಭಿಮಾನಿಗಳು ಕೂಡ ಶರತ್ ಬಾಬು ಆರೋಗ್ಯದಲ್ಲಿ ಶೀಘ್ರದಲ್ಲಿ ಚೇತರಿಕೆ ಕಾಣಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.
https://www.facebook.com/karatekalyani/posts/2791773524298780
ಶರತ್ ಬಾಬು ಅವರ ಆರೋಗ್ಯ ಹದಗೆಟ್ಟಿರುವ ಕುರಿತಾಗಿ ತೆಲುಗು ನಟಿ ಕಲ್ಯಾಣಿ ಪಾದಲಾ (ಕರಾಟೆ ಕಲ್ಯಾಣಿ) ಬರೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ಮಾಹಿತಿ ನೀಡಿದ್ದಾರೆ. ಅದರೊಂದಿಗೆ ನನ್ನ ನೆಚ್ಚಿನ ಹೀರೋ, ಬೇಗ ಗುಣಮುಖರಾಗಲಿ ಎಂದು ಬರೆದುಕೊಂಡಿದ್ದಾರೆ.