ಸಿಎಂ ಬಸವರಾಜ್ ಬೊಮ್ಮಾಯಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡ್ ಆಗುವಾಗ ಬೆಂಕಿ ಅನಾಹುತ
ಉಡುಪಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಇಳಿದ ಹೆಲಿಪ್ಯಾಡ್‍ನಲ್ಲಿ (Helipad) ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ (BJP) ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಬಸವರಾಜ ಬೊಮ್ಮಾಯಿ ಅವರು ಅರೆಶಿರೂರು ಹೆಲಿಪ್ಯಾಡ್ ಮೂಲಕ ಕೊಲ್ಲೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಹೆಲಿಕಾಪ್ಟರ್ ಇಳಿಯುವ ಸಂದರ್ಭ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡಿದೆ. ಸಿಎಂ ಎಸ್ಕಾರ್ಟ್ ಹೋದ ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಸ್ಥಳದಲ್ಲಿದ್ದ ಅಗ್ನಿಶಾಮಕ ದಳದವರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಸದ್ಯ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.
ಬೆಂಕಿ ಹೊತ್ತಿಕೊಂಡಿದ್ದು ಯಾಕೆ?: ಹೆಲಿಕಾಪ್ಟರ್‌ನಲ್ಲಿ ಮೇಲಿನಿಂದ ನೋಡಿದಾಗ ಎಲ್ಲವೂ ಬಯಲಿನಂತೆ ಕಾಣುತ್ತದೆ. ಈ ಕಾರಣಕ್ಕೆ ಲ್ಯಾಂಡಿಂಗ್ ಜಾಗದಲ್ಲೇ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಹೊಗೆ ಬಿಡಲಾಗುತ್ತದೆ. ದಟ್ಟವಾದ ಹೊಗೆ ಬಂದ ಜಾಗದಲ್ಲಿ ಹೆಲಿಪ್ಯಾಡ್ ಇದೆ ಎಂದು ತಿಳಿದು ಪೈಲಟ್ ಹೆಲಿಕಾಪ್ಟರ್ ಅನ್ನು ಲ್ಯಾಂಡ್ ಮಾಡುತ್ತಾರೆ.
ಸಿಎಂ ವಾಹನದಲ್ಲಿ ಕೊಲ್ಲೂರಿಗೆ ಬರಲಿದ್ದಾರೆ ಎಂಬ ಮಾಹಿತಿ ಜಿಲ್ಲಾಡಳಿತಕ್ಕೆ ಸಿಕ್ಕಿತ್ತು. ಆದರೆ ಕೊನೆ ಕ್ಷಣದಲ್ಲಿ ಸಿಎಂ ಹೆಲಿಕಾಪ್ಟರ್‌ನಲ್ಲಿ ಬಂದಿದ್ದಾರೆ. ಲ್ಯಾಂಡಿಂಗ್ ಜಾಗದ ಬಳಿ ಹುಲ್ಲುಗಳು ಬೆಳೆದಿತ್ತು. ಕೊನೆ ಕ್ಷಣದಲ್ಲಿ ನಿಗದಿಯಾದ ಕಾರಣ ಈ ಹುಲ್ಲುಗಳನ್ನು ತೆಗೆದಿರಲಿಲ್ಲ. ಪರಿಣಾಮ ಹೆಲಿಕಾಪ್ಟರ್ ರೆಕ್ಕೆಯಿಂದಾಗಿ ಗಾಳಿ ವೇಗವಾಗಿ ಬೀಸಿದ್ದರಿಂದ ಹೊಗೆಯೊಂದಿಗೆ ಹುಲ್ಲಿನ ಜಾಗಕ್ಕೆ ಹರಡಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಪತ್ನಿ ಚೆನ್ನಮ್ಮ ಜೊತೆ ಭೇಟಿ ನೀಡಿದ್ದರು. ದಂಪತಿ ಸಮೇತ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದರು. ದೇವಸ್ಥಾನದ ಪ್ರಾಂಗಣದ ಗರುಡಗಂಬಕ್ಕೆ ಪೂಜೆ ಸಲ್ಲಿಸಿದರು. ಈ ವೇಳೆ ಬಿಜೆಪಿಯ ಜಿಲ್ಲಾ ಮುಖಂಡರು ಸಿಎಂ ದಂಪತಿಗೆ ಸಾಥ್ ನೀಡಿದರು.