ವಿಜಯೇಂದ್ರ ಸ್ವಕ್ಷೇತ್ರ, ಶಿರಾಳಕೊಪ್ಪ ಪುರಸಭೆಯಲ್ಲಿ 25 ವರ್ಷಗಳ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ
ಶಿರಾಳಕೊಪ್ಪ: ವಿಜಯೇಂದ್ರ ಸ್ವಕ್ಷೇತ್ರ ಶಿಕಾರಿಪುರದ ಶಿರಾಳಕೊಪ್ಪ ಪುರಸಭೆಯಲ್ಲಿ 25 ವರ್ಷಗಳ ಬಳಿಕ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಬಿಜೆಪಿ ತೆಕ್ಕೆಯಲ್ಲಿದ್ದ ಶಿರಾಳಕೊಪ್ಪ ಪುರಸಭೆ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ಬಂದಿದೆ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿದೆ.
ಕಾಂಗ್ರೆಸ್‌ನ ಮಮತಾ ಅವರು ಅಧ್ಯಕ್ಷರಾಗಿ ಹಾಗೂ ಮುದಾಸೀರ್ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 17 ಜನ ಸದಸ್ಯರ ಬಲ ಇರುವ ಪುರಸಭೆ ಕಳೆದ ಬಾರಿ ಬಿಜೆಪಿ ಅಧಿಕಾರದಲ್ಲಿ ಇತ್ತು, ಎರಡನೇ ಅವಧಿಗೆ ಕಾಂಗ್ರೆಸ್‌ಗೆ 11 ಜನ ಸದಸ್ಯರ ಬಲದಿಂದ ಅಧಿಕಾರ ಹಿಡಿದಿದೆ.
ಕಳೆದ 25 ವರ್ಷದಲ್ಲಿ ಕೇವಲ 12 ತಿಂಗಳು ಮಾತ್ರ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಿತ್ತು. ಈಗ ಮತ್ತೆ ಪುರಸಭೆ ಗದ್ದಿಗೆಗೆ ಏರಿದ್ದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹರ್ಷವನ್ನುಂಟು ಮಾಡಿದೆ. ಚುನಾವಣಾ ಅಧಿಕಾರಿಯಾಗಿ ಉಪವಿಭಾಗಾಧಿಕಾರಿ ಯತೀಶ್ ನಡೆಸಿಕೊಟ್ಟರು. ಶಿರಾಳಕೊಪ್ಪ ಪುರಸಭೆಯು ಒಟ್ಟು 16 ಸ್ಥಾನವನ್ನು ಹೊಂದಿದೆ. ಇಂದಿನ ಚುನಾವಣಾ ಪ್ರಕ್ರಿಯೆಯಲ್ಲಿ ಕಳೆದ ಭಾರಿ ಅಧಿಕಾರ ನಡೆಸಿದ ಮಂಜುಳಮ್ಮ ಹಾಗೂ ಟಿ.ರಾಜು ಅವರು ಗೈರಾಗಿದ್ದರು.
ಕಳೆದ 25 ವರ್ಷಗಳಿಂದ ಸುದೀರ್ಘ ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷಕ್ಕೆ ಭಾರಿ ಮುಖಭಂಗವಾಗಿದ್ದು, ಬಿಜೆಪಿಯ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ, ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಸಕ್ಷೇತ್ರದಲ್ಲೇ ಮುಖಭಂಗವಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಗರಾಜ ಗೌಡ, ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಶಿಕಾರಿಪುರ ಪುರಸಭೆ ಬಿಜೆಪಿ ತೆಕ್ಕೆಗೆ:
ಶಿಕಾರಿಪುರ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶೈಲಾ ಯೋಗೀಶ್ ಹಾಗೂ ಉಪಾಧ್ಯಕ್ಷರಾಗಿ ರೂಪಾ ಮಂಜುನಾಥ್ ಅವರು ಆಯ್ಕೆಯಾಗಿದ್ದಾರೆ. ಶಿಕಾರಿಪುರ ಪುರಸಭೆಯು ಒಟ್ಟು 23 ಸದಸ್ಯ ಬಲವನ್ನು ಹೊಂದಿದೆ. ಕಾಂಗ್ರೆಸ್ ಓರ್ವ ಸದಸ್ಯ ರಾಜೀನಾಮೆ ನೀಡಿದ್ದಾರೆ. ಇದರಲ್ಲಿ 14 ಬಿಜೆಪಿ ಹಾಗೂ 8 ಕಾಂಗ್ರೆಸ್ ಸದಸ್ಯರನ್ನು ಒಳಗೊಂಡಿದೆ. ಶಿಕಾರಿಪುರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ, ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿ ತಾಲೂಕು ಪಧಾಧಿಕಾರಿಗಳಿದ್ದರು.
ಕಾರವಾರ ನಗರಸಭೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿಯ ರವಿರಾಜ್, ಉಪಾಧ್ಯಕ್ಷೆಯಾಗಿ ಜೆಡಿಎಸ್‌ನ ಪ್ರೀತಿ ಆಯ್ಕೆ:
ಕಾರವಾರ: ಸಮಬಲದ ಸ್ಥಾನಗಳಿಂದಾಗಿ ಬಿಜೆಪಿ-ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದ್ದ ಕಾರವಾರ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕೊನೆಗೂ ಮೈತ್ರಿ ಪಕ್ಷ ಜಯ ಗಳಿಸಿದೆ. ಬಿಜೆಪಿಯ ರವಿರಾಜ್ ಅಂಕೋಲೆಕರ್ ಅಧ್ಯಕ್ಷರಾಗಿ ಹಾಗೂ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಪ್ರೀತಿ ಮಧುಕರ್ ಜೋಶಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಕಾರವಾರ ನಗರಸಭೆಯ ಸ್ಥಾನಕ್ಕಾಗಿ ಎರಡು ಪಕ್ಷದವರು ತೀವ್ರ ಪೈಟೋಟಿ ನಡೆಸಿದ್ದರು. ಅದರಂತೆ ಬುಧವಾರ ಚುನಾವಣಾ ಪ್ರಕ್ರಿಯೆ ನಡೆದು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ನೂತನ ಅಧ್ಯಕ್ಷ ರವಿರಾಜ್ ಅಂಕೋಲೇಕರ್ ಅವರು ಒಟ್ಟು 19 ಮತಗಳನ್ನು ಪಡೆದರು. ಕಾಂಗ್ರೆಸ್ನಿಂದ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಪ್ರಕಾಶ ಪಿ. ನಾಯ್ಕ 14 ಮತಗಳನ್ನು ಪಡೆದು ಸೋಲು ಅನುಭವಿಸಿದರು.
ಅದೇ ರೀತಿ ಜೆಡಿಎಸ್ ಅಭ್ಯರ್ಥಿ ಪ್ರೀತಿ ಜೋಶಿ ಕೂಡ 19 ಮತಗಳನ್ನು ಪಡೆದು ಕಾಂಗ್ರೆಸ್‌ನ ಸ್ನೇಹಲ್ ಹರಿಕಂತ್ರ ವಿರುದ್ಧ ಜಯ ಗಳಿಸಿದರು. ಬಿಜೆಪಿಯ ಗೆಲುವಿಗಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಎಂಎಲ್ಸಿ ಗಣಪತಿ ಉಳ್ವೇಕರ್ ಸೇರಿದಂತೆ ಒಟ್ಟು ಮೂವರು ಜೆಡಿಎಸ್, ಪಕ್ಷೇತರ ಮೂವರು ಸದಸ್ಯರು ಬಿಜೆಪಿ ಪರ ಮತ ಚಲಾಯಿಸಿದರು.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಳೆದ ಅವಧಿಯಲ್ಲಿ ಬಿಜೆಪಿ ಬೆಂಬಲಿಸಿದ್ದ ಪ್ರಕಾಶ ಪಿ. ನಾಯ್ಕ ಅವರು ಉಪಾಧ್ಯಕ್ಷರಾಗಿದ್ದರು. ಆದರೆ ಈ ಸಲ ಬಿಜೆಪಿಯಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ರವಿರಾಜ್ ಅಂಕೋಲೇಕರ್ ಅವರಿಗೆ ಅಧ್ಯಕ್ಷ ಸ್ಥಾನ ಬಿಜೆಪಿಯಿಂದ ನಿಗದಿಯಾಗಿದ್ದರಿಂದ ಪ್ರಕಾಶ ಪಿ. ನಾಯ್ಕ ಈ ಸಲ ಕಾಂಗ್ರೆಸ್ ಬೆಂಬಲಿಸಿದ್ದರು. ಇದರಿಂದ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಬದಿಗಿಟ್ಟು ಪ್ರಕಾಶ ಪಿ. ನಾಯ್ಕ ಅವರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದರು.
ಹಾಸನ ನಗರಸಭೆ ಜೆಡಿಎಸ್ ತೆಕ್ಕೆಗೆ:
ಹಾಸನ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಚುನಾವಣೆಯ ಜಿದ್ದಾ ಜಿದ್ದಿನ ದೋಸ್ತಿ ಹೋರಾಟದಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ. ಆ ಮೂಲಕ ಮಾಜಿ ಶಾಸಕ ಪ್ರೀತಂಗೌಡಗೆ ಹಿನ್ನೆಡೆ ಆಗಿದೆ. ಈ ವಿಚಾರವಾಗಿ ಮಾತನಾಡಿದ ಪ್ರೀತಂಗೌಡ, ಮಿತ್ರ ಪಕ್ಷದ ನಡೆಗೆ ಕೆಂಡಾಮಂಡಲರಾಗಿದ್ದಾರೆ. ಮೈತ್ರಿ ಧರ್ಮ ಪಾಲಿಸಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.
ಹಾಸನ (Hassan) ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಂಗೌಡ (Preetham Gowda) -ಜೆಡಿಎಸ್‌ನ ಸ್ವರೂಪ್ ಪ್ರಕಾಶ್ ಬೆಂಬಲಿಗರ ಮಧ್ಯೆ ಜಿದ್ದಾಜಿದ್ದಿ ನಡೆದಿದೆ. ಅಂತಿಮವಾಗಿ ಜೆಡಿಎಸ್‌ನ ಸ್ವರೂಪ್‌ಗೌಡ ಬೆಂಬಲಿಗರು ಮೇಲುಗೈ ಸಾಧಿಸಿದ್ದು, ಹಾಸನ ನಗರಸಭೆ (Hassan Municipality) ಜೆಡಿಎಸ್ ಪಾಲಾಗಿದೆ.
ಅಧ್ಯಕ್ಷರಾಗಿ ಜೆಡಿಎಸ್ (JDS) ಚಂದ್ರೇಗೌಡ ಆಯ್ಕೆಯಾಗಿದ್ದಾರೆ. ಜೆಡಿಎಸ್‌ಗೆ ಮತ ಹಾಕದೇ ಬಿಜೆಪಿ ಸದಸ್ಯರು ತಟಸ್ಥವಾಗಿ ಉಳಿದಿದ್ದಾರೆ. ಇನ್ನು, ಬಿಜೆಪಿಯ ಲತಾದೇವಿ ಜೆಡಿಎಸ್‌ನಲ್ಲಿ ಗುರುತಿಸಿಕೊಂಡು ಉಪಾಧ್ಯಕ್ಷೆಯಾಗಿದ್ದಾರೆ. ಮೈತ್ರಿಯಂತೆ ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಬಿಜೆಪಿ, ಶಿಲ್ಪಾವಿಕ್ರಮ್‌ರನ್ನು ಇಳಿಸಿತ್ತು. ಆದರೆ, ವಿಪ್ ಜಾರಿ ಹಿನ್ನೆಲೆಯಲ್ಲಿ ಶಿಲ್ಪಾವಿಕ್ರಂಗೆ ಕೈ ಎತ್ತುವ ಮೂಲಕ ತಮ್ಮ ವಿರುದ್ಧವೇ ಲತಾದೇವಿ ಮತ ಹಾಕಿದ್ದರು. ಆದರೆ, ಲತಾದೇವಿಗೆ ಜೆಡಿಎಸ್‌ನವರು ಹೆಚ್ಚು ವೋಟ್ ಹಾಕಿ ಗೆಲ್ಲಿಸಿಕೊಂಡಿದ್ದಾರೆ.
ಹಾಸನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಂಗೌಡ (Preetham Gowda) -ಜೆಡಿಎಸ್‌ನ ಸ್ವರೂಪ್ ಪ್ರಕಾಶ್ ಬೆಂಬಲಿಗರ ಮಧ್ಯೆ ಜಿದ್ದಾಜಿದ್ದಿ ನಡೆದಿದೆ. ಅಂತಿಮವಾಗಿ ಜೆಡಿಎಸ್‌ನ ಸ್ವರೂಪ್‌ಗೌಡ ಬೆಂಬಲಿಗರು ಮೇಲುಗೈ ಸಾಧಿಸಿದ್ದು, ಹಾಸನ ನಗರಸಭೆ (Hassan Municipality) ಜೆಡಿಎಸ್ ಪಾಲಾಗಿದೆ.