ಕಾಂಗ್ರೆಸ್ನ ಹಿರಿಯ ಸಂಸದ ವಸಂತ್ರಾವ್ ಚವಾಣ್ ನಿಧನ
ಕಾಂಗ್ರೆಸ್ನ ಹಿರಿಯ ಸಂಸದ ವಸಂತ್ರಾವ್ ಚವಾಣ್(Vasantrao Chavan) ನಿಧನರಾಗಿದ್ದಾರೆ. ಹೈದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ. ಸೋಮವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ. ಕಳೆದ ಎರಡು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸಾವಿನೊಂದಿಗೆ ಅವರ ಹೋರಾಟ ವಿಫಲವಾಯಿತು.
ಆರಂಭದಲ್ಲಿ ಚವಾಣ್ ಯಕೃತ್ತಿನ ಸೋಂಕಿನಿಂದಾಗಿ ನಾಂದೇಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ಸಮಸ್ಯೆಯನ್ನೂ ಎದುರಿಸುತ್ತಿದ್ದರು. ಲೋ ಬಿಪಿ ಕೂಡ ಇತ್ತು. ಚವಾಣ್ ಅವರನ್ನು ಏರ್ ಆಂಬುಲೆನ್ಸ್ ಮೂಲಕ ಹೈದರಾಬಾದ್‌ಗೆ ಕರೆದೊಯ್ಯಲಾಯಿತು.
ಅವರು ಪ್ರತಿ ತಿಂಗಳು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು, ನಾಂದೇಡ್‌ನಲ್ಲಿ ನಡೆದ ಕಾಂಗ್ರೆಸ್ ವಿಭಾಗೀಯ ಸಭೆಯಿಂದಾಗಿ ನಿತ್ಯ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಅವರ ಆರೋಗ್ಯ ಹದಗೆಟ್ಟಿತ್ತು ಎಂದು ತಿಳಿದುಬಂದಿದೆ.
ಲೋಕಸಭೆ ಚುನಾವಣೆಗೆ ಕೆಲವು ದಿನಗಳ ಮೊದಲು ಅಶೋಕ್ ಚವಾಣ್ ಬಿಜೆಪಿ ಸೇರಿದ್ದರು. ಈ ಹಿನ್ನೆಲೆಯಲ್ಲಿ ನಾಂದೇಡ್ ಚುನಾವಣೆ ಕುರಿತು ಚರ್ಚೆ ನಡೆಸಲಾಯಿತು. ಕಾಂಗ್ರೆಸ್ ಭದ್ರಕೋಟೆಯಾಗಿರುವ ನಾಂದೇಡ್ ಕ್ಷೇತ್ರದಲ್ಲಿ 2004ರ ಚುನಾವಣೆಗೆ ಬಿಜೆಪಿ ಪ್ರವೇಶಿಸಿತ್ತು.
ಆದರೆ ಕಾಂಗ್ರೆಸ್ ಅಭ್ಯರ್ಥಿ ವಸಂತ್ ಚವಾಣ್ ಬಿಜೆಪಿಯ ಅಂದಿನ ಸಂಸದ ಪ್ರತಾಪ್ ಪಾಟೀಲ್ ಚಿಖ್ಲಿಕರ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದರು. ಚವಾಣ್ ಅವರು ಚಿಖ್ಲಿಕರ್ ಅವರನ್ನು 59 ಸಾವಿರದ 442 ಮತಗಳಿಂದ ಸೋಲಿಸಿದರು. ವಸಂತರಾವ್ ಚವಾಣ್ 5,28,894 ಹಾಗೂ ಚಿಖ್ಲಿಕರ್ 4,69,452 ಮತಗಳನ್ನು ಪಡೆದಿದ್ದರು.
ವಸಂತ್ ಚವಾಣ್ ಅವರು ಪ್ರಾಮಾಣಿಕ ಮತ್ತು ನಿಷ್ಠಾವಂತ ಕಾಂಗ್ರೆಸ್ ನಾಯಕ ಎಂದು ಹೆಸರಾಗಿದ್ದರು. ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ನಾಂದೇಡ್ ಕ್ಷೇತ್ರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. ಮಹಾವಿಕಾಸ್ ಅಘಾಡಿಯ ಎಲ್ಲಾ ಮೂರು ಪಕ್ಷದ ನಾಯಕರು ಅಂದು ಚವಾಣ್ ಪರ ಒಮ್ಮತದಿಂದ ಪ್ರಚಾರ ಮಾಡಿದ್ದರು.
ವೈದ್ಯರಿಗೆ ಕಪಾಳ ಮೋಕ್ಷ, FIR ದಾಖಲು:
ನವದೆಹಲಿ: ರಾಷ್ಟ್ರ ರಾಜಧಾನಿಯ ಶಹದಾರಾ ಪ್ರದೇಶದ ಹೆಡ್ಗೆವಾರ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರೊಬ್ಬರಿಗೆ 50 ವರ್ಷದ ವ್ಯಕ್ತಿಯೊಬ್ಬರು ಕಪಾಳ ಮೋಕ್ಷ ಮಾಡಿರುವ ಘಟನೆ ಭಾನುವಾರ ನಡೆದಿದೆ. ಅಲ್ಲದೇ, ಅವರ ಮಗ ಮತ್ತು ಮಗಳು ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಪಿಯನ್ನು ಯಾದ್ ರಾವ್ ಎಂದು ಗುರುತಿಸಲಾಗಿದೆ. ತಲೆಗೆ ಗಾಯವಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದು ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಸಿಬ್ಬಂದಿಯನ್ನು ಆಸ್ಪತ್ರೆಗೆ ಕಳುಹಿಸಲಾಯಿತು ಎಂದು ಹೆಚ್ಚುವರಿ ಡಿಸಿಪಿ (ಶಹದಾರ) ರಾಜೀವ್ ಕುಮಾರ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ತೀವ್ರವಾಗಿ ಕುಡಿದಿದ್ದರಿಂದ ಮನೆಯಲ್ಲಿ ಕೆಳಗೆ ಬಿದ್ದು ತಲೆ ಗಾಯಗೊಂಡಿದ್ದ ಯಾದ್ ರಾವ್ ಅವರನ್ನು ಮಗ ಮತ್ತು ಮಗಳು ಹೆಡ್ಗೆವಾರ್ ಆಸ್ಪತ್ರೆಗೆ ಕರೆತಂದಿದ್ದಾರೆ. ಕರ್ತವ್ಯ ನಿರತ ಜೂನಿಯರ್ ಡಾ.ಮನೋಜ್ ,ರಾವ್ ಅವರ ತಲೆಗೆ ಹೊಲಿಗೆ ಹಾಕುವಾಗ ಸ್ವಲ್ಪ ನೋವಾಗಿದೆ. ಇದರಿಂದ ಸಿಟ್ಟಾದ ಆರೋಪಿ ಎದ್ದುನಿಂತು ಡಾ.ಮನೋಜ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಅವರ ಮಗಳು ಮತ್ತು ಮಗ ಸಹ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಅವರು ವಿವರಿಸಿದರು.
ಆಸ್ಪತ್ರೆಯ ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 121 ಮತ್ತು 223 ಮತ್ತು ಸೆಕ್ಷನ್ 3 (ಹಿಂಸಾಚಾರದ ನಿಷೇಧ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ
ಆರೋಪಿ ಯಾದ್ ರಾವ್ ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಪ್ರಜ್ಞೆ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ; ಇಬ್ಬರ ಸಾವು
ದಿಂಡಿಗಲ್: ತಮಿಳುನಾಡಿನಲ್ಲಿ ಮತ್ತೊಂದು ಪಟಾಕಿ ದುರಂತ ಸಂಭವಿಸಿದ್ದು, ದಿಂಡಿಗಲ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ.
ಮಿಳುನಾಡಿನ ದಿಂಡಿಗಲ್ ಜಿಲ್ಲೆಯ ನಾಥಂನಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರಿಬ್ಬರೂ ಪಟಾಕಿ ಕಾರ್ಖಾನೆಯ ಕೂಲಿಕಾರ್ಮಿಕರು ಎಂದು ಹೇಳಲಾಗಿದ್ದು, ದುರಂತದಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು ದಿಂಡಿಗಲ್ ಎಸ್ಪಿ ಪ್ರತೀಪ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಫೋಟಕ್ಕೆ ಕಾರಣವೇನು ಎಂಬುದಕ್ಕೆ ನಿಖರವಾದ ಕಾರಣ ಸ್ಪಷ್ಟವಾಗಿಲ್ಲ.. ಆದರೆ ರಕ್ಷಣಾ ಕಾರ್ಯಾಚರಣೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.