ವರದಕ್ಷಿಣೆ ಕಿರುಕುಳ – ಶಾಲಾ ಕೊಠಡಿಯಲ್ಲೇ ವಿಷ ಸೇವಿಸಿ ಶಿಕ್ಷಕಿ ಆತ್ಮಹತ್ಯೆ
ವಿಜಯನಗರ: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಖಾಸಗಿ ಶಾಲಾ ಶಿಕ್ಷಕಿಯೊಬ್ಬರು (School Teacher) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರದಲ್ಲಿ (Vijayanagara) ನಡೆದಿದೆ.
ಬಸಮ್ಮ ಅಲಿಯಾಸ್ ರೂಪಾ (34) ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿ. ಇವರು ಹಡಗಲಿಯ ನ್ಯಾಷನಲ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಶಾಲಾ ಕೊಠಡಿಯಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪತಿ ಅರ್ಜುನ್ ಪರಶೆಟ್ಟಿ ಕೂಡ ಅದೇ ಶಾಲಾಯಲ್ಲಿ ಶಿಕ್ಷಕನಾಗಿದ್ದ. ರೂಪಾ ಮತ್ತು ಅರ್ಜುನ್ ಪರಸ್ಪರ ಪ್ರೀತಿಸಿ 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ನಂತರ ಪತಿ ಹಾಗೂ ಆತನ ಕುಟುಂಬದವರಿಂದ ರೂಪಾಗೆ ವರದಕ್ಷಿಣೆ ಕಿರುಕುಳ ನೀಡಲಾಗಿದೆ. ಇದರಿಂದ ಮನನೊಂದು ರೂಪಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ನ್ಯಾಷನಲ್ ಶಾಲೆ ಅರ್ಜುನ್ ಕುಟುಂಬದ ಒಡೆತನಕ್ಕೆ ಸೇರಿದ್ದಾಗಿದೆ. ಗಂಡ-ಹೆಂಡತಿ ಇಬ್ಬರೂ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪತಿ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತಿದ್ದರು. ಭಾನುವಾರ ಪರೀಕ್ಷೆ ಕೆಲಸದ ನೆಪದಲ್ಲಿ ಶಾಲೆಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್‌ನೋಟ್ ಬರೆದಿಟ್ಟು ರೂಪಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿ ಅರ್ಜುನ್, ಅತ್ತೆ ಅಂಬಿಕಾ, ನಾದಿನಿ ಸಂಗೀತಾ ಸೇರಿದಂತೆ ಆರು ಮಂದಿ ವಿರುದ್ಧ ಕೇಸ್ ದಾಖಲಾಗಿದೆ.