ಲಿಯಾನ್ ಸ್ಪಿನ್ ಮ್ಯಾಜಿಕ್, ಸೋಲಿನ ಸುಳಿಯಲ್ಲಿ ಭಾರತ; ಆಸ್ಟ್ರೇಲಿಯಾಗೆ 76 ರನ್ ಗುರಿ
ಇಂದೋರ್: ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯ ಇಂದೋರ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿದ್ದು ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 163 ರನ್ ಗಳಿಗೆ ಆಲೌಟ್ ಆಗಿದೆ.
ನಾಥನ್ ಲಿಯಾನ್ ಬೌಲಿಂಗ್ ದಾಳಿಗೆ ಭಾರತದ ಬ್ಯಾಟ್ಸ್‌ಮನ್‌ಗಳು ತತ್ತರಿಸಿದ್ದು ಲಿಯಾನ್ 8 ವಿಕೆಟ್ ಪಡೆದಿದ್ದಾರೆ. ಭಾರತದ ಪರ ಚೇತೇಶ್ವರ ಪೂಜಾರ ಅರ್ಧಶತಕ ಬಾರಿಸಿದ ಏಕೈಕ ಬ್ಯಾಟ್ ಮನ್ ಆಗಿದ್ದಾರೆ.
ಈ ಮೂಲಕ ಆಸ್ಟ್ರೇಲಿಯಾಕ್ಕೆ 76 ರನ್ ಗಳ ಗುರಿ ಸಿಕ್ಕಿತು. ಪಂದ್ಯದ ಮೂರನೇ ದಿನ ಕಾಂಗರೂ ಪಡೆ ಈ ಗುರಿ ಬೆನ್ನತ್ತಲಿದೆ. ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 197 ರನ್ ಪೇರಿಸಿತ್ತು. ಈ ಮೂಲಕ ತಂಡ 88 ರನ್‌ಗಳ ಮುನ್ನಡೆ ಸಾಧಿಸಿತು.
ಮೊದಲ ದಿನದಾಟಕ್ಕೆ 4 ವಿಕೆಟ್ ನಷ್ಟಕ್ಕೆ 156 ರನ್ ಪೇರಿಸಿದ್ದ ಆಸ್ಟ್ರೇಲಿಯಾ ಈ ದಿನದ ಪಂದ್ಯದಲ್ಲಿ ಕೇವಲ 47 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು 197 ರನ್ ಗಳಿಗೆ ಸರ್ವಪತನ ಕಂಡಿತು. 88 ರನ್ ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ನಾಥನ್ ಲಿಯಾನ್ ಮಾರಕರಾದರು.
ಭಾರತಕ್ಕೆ ಶುಭಮನ್ ಗಿಲ್(5) ರೂಪದಲ್ಲಿ ಮೊದಲ ಹೊಡೆತ ಬಿದ್ದರೆ, ಎರಡನೇ ವಿಕೆಟ್ ಭಾರತದ ನಾಯಕ ರೋಹಿತ್ ಶರ್ಮಾ (12) ರೂಪದಲ್ಲಿ ಪತನವಾಯಿತು. ವಿರಾಟ್ ಕೊಹ್ಲಿ 13 ರನ್ ಗಳಿಸಿ ಔಟಾದರೆ ರವೀಂದ್ರ ಜಡೇಜಾ 7 ರನ್ ಗಳಿಸಿ ಪೆವಿಲಿಯನ್ ಸೇರಿದರು. ಈ ವೇಳೆ ಶ್ರೇಯಸ್ ಅಯ್ಯರ್ ಉತ್ತಮ ಆಟ ಆರಂಭಿಸಿದರೂ 26 ರನ್ ಗಳಿಸಿದ್ದ ಅವರನ್ನು ಸ್ಟಾರ್ಕ್ ಔಟಾದರು. ನಂತರ ಬಂದ ಅಶ್ವಿನ್ 13 ರನ್ ಗಳಿಸಿ ಔಟಾದರು. ಪೂಜಾರ 59 ರನ್ ಗಳಿಸಿ ಔಟಾದರು. ಉಮೇಶ್ ಮತ್ತು ಸಿರಾಜ್ ಶೂನ್ಯಕ್ಕೆ ಔಟಾದರು. ಇನ್ನು ಅಕ್ಷರ್ ಪಟೇಲ್ ಅಜೇಯ 15 ರನ್ ಪೇರಿಸಿದ್ದಾರೆ.
ಆಸ್ಟ್ರೇಲಿಯಾ ಪರ ನಾಥನ್ ಲಿಯಾನ್ 8 ವಿಕೆಟ್ ಪಡೆದರೆ ಸ್ಟಾರ್ಕ್ ಮತ್ತು ಕುಹ್ನೆಮನ್ ತಲಾ 1 ವಿಕೆಟ್ ಪಡೆದಿದ್ದಾರೆ.