ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಟಿ ಖುಷ್ಬೂ ಸುಂದರ್ ಆಯ್ಕೆ

ತಮಿಳುನಾಡು, ಫೆ 27 : ತಮಿಳುನಾಡು ರಾಜ್ಯದ ಬಿಜೆಪಿ ನಾಯಕಿ ಹಾಗೂ ನಟಿ ಖುಷ್ಬೂ ಸುಂದರ್ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ.
ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ರಾಷ್ಟ್ರೀಯ ಮಹಿಳಾ ಆಯೋಗದ (NCW) ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಕ್ಕಾಗಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಖುಷ್ಬೂ ಸುಂದರ್ ಅವರನ್ನು ಸೋಮವಾರ ಅಭಿನಂದಿಸಿದ್ದಾರೆ ಮಾತ್ರವಲ್ಲದೆ ಮಹಿಳೆಯರ ಹಕ್ಕುಗಳಿಗಾಗಿ ಅವರ ನಿರಂತರ ಹೋರಾಟಕ್ಕೆ ಸಂದ ಫಲ ಎಂದು ಅಣ್ಣಾಮಲೈ ಹೇಳಿದ್ದಾರೆ.
ಇಂತಹ ದೊಡ್ಡ ಜವಾಬ್ದಾರಿಯನ್ನು ನನಗೆ ವಹಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಖುಷ್ಬೂ ಅವರು ಈ ಹಿಂದೆ ಡಿಎಂಕೆ ಪಕ್ಷದಲ್ಲಿದ್ದರು, ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಬಳಿಕ ಅಲ್ಲಿಂದ ಬಿಜೆಪಿಗೆ ಸೇರಿದರು. 2021ರಲ್ಲಿ ಬಿಜೆಪಿಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಖುಷ್ಬೂ ಅವರೊಂದಿಗೆ ಮತ್ತಿಬ್ಬರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.