ಚುನಾವಣೆ ಹೊತ್ತಲ್ಲಿ ದೇಶಾದ್ಯಂತ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಕೇಸ್ ಭಾರಿ ಸದ್ದು ಮಾಡುತ್ತಿದೆ.ತಲೆಮರೆಸಿಕೊಂಡಿರುವ ಜೆಡಿಎಸ್ ಸಂಸದ ಪ್ರಜ್ವಲ್ ಲೋಕಸಭೆ ಚುನಾವಣೆ ನಂತರ ಭಾರತಕ್ಕೆ ಮರಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.ಏತನ್ಮಧ್ಯೆ, ಜೆಡಿ (ಎಸ್) ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಕರ್ನಾಟಕದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ನವೀಕರಿಸಿದ ಪ್ರಯಾಣಿಕರ ಪಟ್ಟಿಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ.
ಮೇ 7 ರ ಚುನಾವಣೆ ಬಳಿಕ ಪ್ರಜ್ವಲ್ ರೇವಣ್ಣ ಭಾರತಕ್ಕೆ ಆಗಮನ..?
ಏಪ್ರಿಲ್ 26ರಂದು ಜರ್ಮನಿಗೆ ತೆರಳಿದ್ದ ಪ್ರಜ್ವಲ್ ಅಂದೇ ರಿಟರ್ನ್ ಟಿಕೆಟ್ ಬುಕ್ ಮಾಡಿದ್ದರು. ಮೇ 15ಕ್ಕೆ ವಾಪಸ್ ಬರಲು ರಿಟರ್ನ್ ಟಿಕೆಟ್ ಬುಕ್ ಆಗಿತ್ತು. ಇದಾದ ಬಳಿಕ ಎಸ್‌ಐಟಿ ನೋಟಿಸ್ ಹಿನ್ನೆ ಮೇ 3ಕ್ಕೆ ವಾಪಸ್ ಬರಲು ಮತ್ತೊಂದು ಟಿಕೆಟ್ ಬುಕ್ ಮಾಡಲಾಗಿತ್ತು. ಇನ್ನು ಪ್ರಜ್ವಲ್ಗಾಗಿ ಎಸ್‌ಐಟಿ ಅಧಿಕಾರಿಗಳು 2 ದಿನದಿಂದ ಕಾಯುತ್ತಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲೇ ಎಸ್‌ಐಟಿ ಅಧಿಕಾರಿಗಳು ಠಿಕಾಣಿ ಹೂಡಿದ್ದು, ಇಮಿಗ್ರೇಷನ್ನಲ್ಲಿ ಬೆಂಗಳೂರಿಗೆ ಬರುವ ವಿಮಾನಗಳ ಪ್ರಯಾಣಿಕರ ಲಿಸ್ಟ್ ಪರಿಶೀಲನೆ ನಡೆಸಿದ್ದಾರೆ. ಪ್ರಜ್ವಲ್ ಪಾಸ್ಪೋರ್ಟ್ ನಂಬರ್ ಸಮೇತ ಟಿಕೆಟ್ ಪರಿಶೀಲನೆ ಮಾಡಿದ್ದಾರೆ. ಆದರೆ, ಈವರೆಗೂ ಯಾವುದೇ ಫ್ಲೈಟ್ನಲ್ಲಿ ಪ್ರಜ್ವಲ್ ಟಿಕೆಟ್ ಬುಕ್ ಆಗಿಲ್ಲ. ದುಬೈ, ಮಸ್ಕತ್, ಫ್ರಾಂಕ್ಫರ್ಟ್ ಸೇರಿ ಹಲವು ದೇಶಗಳ ವಿಮಾನಗಳ ಮೇಲೂ ಹದ್ದಿನ ಕಣ್ಣು ಇಡಲಾಗಿದೆ. ಎರಡು ಪಾಳಿಯಲ್ಲಿ ಎರಡು ತಂಡಗಳಿಂದ ಏರ್ಪೋಟ್ನಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಜ್ವಲ್ಗೆ ಬಂದ್ರೆ ಏರ್ಪೋಟ್ನಿಂದಲೇ ವಶಕ್ಕೆ ಪಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ತಂದೆ ಹೆಚ್‌ಡಿ ರೇವಣ್ಣ ಬಂಧನದ ಹಿನ್ನೆಲೆಯಲ್ಲಿ ಹಾಲಿ ಸಂಸದ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಶರಣಾಗಲಿದ್ದಾರೆ ಎಂದು ಜೆಡಿಎಸ್ ಹಿರಿಯ ಮುಖಂಡ ಸಿಎಸ್ ಪುಟ್ಟರಾಜು ಸುಳಿವು ನೀಡಿದ್ದರು. ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಅವರನ್ನು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಬಂಧಿಸಲಾಗಿತ್ತು. ಇದೇ ವೇಳೆ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಕಾಂಗ್ರೆಸ್ ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ.
ಏತನ್ಮಧ್ಯೆ, ಸೆಕ್ಸ್ ವಿಡಿಯೋ ಹಗರಣದ ಸಂತ್ರಸ್ತರೊಬ್ಬರನ್ನು ಎಸ್‌ಐಟಿ ಅಧಿಕಾರಿಗಳು ಸ್ಥಳ ಮಹಜರು ಮಾಡಲು ಬೆಂಗಳೂರಿನ ಬಸವನಗುಡಿಯಲ್ಲಿರುವ ಎಚ್‌ಡಿ ರೇವಣ್ಣ ಅವರ ನಿವಾಸಕ್ಕೆ ಕರೆದೊಯ್ದಿದ್ದಾರೆ. ಇನ್ನೂ ಎಸ್ ಐ ಟಿ ವಶದಲ್ಲಿರುವ ಮಾಜಿ ಸಚಿವ ರೇವಣ್ಣ ಅಧಿಕಾರಿಗಳು ಕೇಳುವ ಯಾವುದೇ ಪ್ರಶ್ನೆಗೆ ಸರಿಯಾಗಿ ಉತ್ತರಿಸುತ್ತಿಲ್ಲ ಎಂದು ತಿಳಿದು ಬಂದಿದೆ.
ಏನೇ ಪ್ರಶ್ನೆ ಕೇಳಿದರೂ ನನಗೆ ಗೊತ್ತಿಲ್ಲ, ನಾನು ಏನು ಮಾಡಿಲ್ಲ, ನನ್ನ ರಾಜಕೀಯ ಭವಿಷ್ಯ ಹಾಳು ಮಾಡಲು ಪಿತೂರಿ ನಡೆಸಿದ್ದಾರೆ ಎಂದು ಹೇಳುತ್ತಿರುವುದಾಗಿ ಮೂಲಗಳು ತಿಳಿಸಿವೆ.