ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ ಇಂಗ್ಲೆಂಡ್ ಸವಾಲು; ಗೆದ್ದರೇ ಸೆಮೀಸ್‌ಗೆ ಎಂಟ್ರಿ..!
ಪೋರ್ಚ್ ಎಲಿಜಬೆತ್(ಫೆ.18): ಐಸಿಸಿ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಳ್ಳುವ ನಿರೀಕ್ಷೆಯಲ್ಲಿರುವ ಭಾರತ ಮಹಿಳಾ ತಂಡ, ಶನಿವಾರ ಮಾಜಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಸೆಣಸಾಡಲಿದೆ. ಆರಂಭಿಕ 2 ಪಂದ್ಯಗಳಲ್ಲಿ ಜಯ ಸಾಧಿಸಿರುವ ಹರ್ಮನ್‌ಪ್ರೀತ್ ಕೌರ್ ಬಳಗ ಈ ಪಂದ್ಯದಲ್ಲೂ ಗೆದ್ದರೆ ಅಧಿಕೃತವಾಗಿ ನಾಕೌಟ್ಗೇರಲಿದೆ.
ಸೋತರೆ ಕೊನೆ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡ ಎದುರಾಗಲಿದೆ. ಅತ್ತ ಇಂಗ್ಲೆಂಡ್ ಕೂಡಾ ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದು, ಭಾರತ ವಿರುದ್ಧವೂ ಜಯಗಳಿಸಿದರೆ ತಂಡಕ್ಕೆ ಸೆಮೀಸ್ ಟಿಕೆಟ್ ಸಿಗಲಿದೆ. ಉಭಯ ತಂಡಗಳು ತಲಾ 4 ಅಂಕ ಹೊಂದಿದ್ದರೂ, ನೆಟ್ ರನ್ರೇಟ್ ಆಧಾರದಲ್ಲಿ ಇಂಗ್ಲೆಂಡ್ ಅಗ್ರಸ್ಥಾನದಲ್ಲಿದೆ.
ಭಾರತ ತಂಡವು ಬ್ಯಾಟಿಂಗ್‌ನಲ್ಲಿ ಶಫಾಲಿ ವರ್ಮಾ, ಸ್ಮೃತಿ ಮಂಧನಾ, ಜೆಮಿಮಾ ರೋಡ್ರಿಗ್ಸ್, ಹರ್ಮನ್‌ಪ್ರೀತ್ ಕೌರ್ ಹಾಗೂ ರಿಚಾ ಘೋಷ್ ಅವರನ್ನು ನೆಚ್ಚಿಕೊಂಡಿದೆ. ಇನ್ನು ಆಲ್ರೌಂಡರ್ ಪಾತ್ರವನ್ನು ದೀಪ್ತಿ ಶರ್ಮಾ ಹಾಗೂ ಪೂಜಾ ವಸ್ತ್ರಾಕರ್ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ರೇಣುಕಾ ಸಿಂಗ್, ರಾಧಾ ಯಾದವ್ ಹಾಗೂ ದೇವಿಕಾ ವೈದ್ಯ ಕೂಡಾ ಜವಾಬ್ದಾರಿಯುತ ಪ್ರದರ್ಶನ ತೋರುತ್ತಿದ್ದಾರೆ.
ಇನ್ನೊಂದೆಡೆ ಇಂಗ್ಲೆಂಡ್ ತಂಡವು ಹೆಚ್ಚಾಗಿ ಸೋಫಿಯಾ ಡಂಕ್ಲಿ, ಡೇನಿಯಲ್ ವ್ಯಾಟ್, ನಥಾಲಿ ಶೀವರ್ ಬ್ರಂಟ್ ನಾಯಕಿ ಹೀಥರ್ ನೈಟ್ ಅವರನ್ನು ನೆಚ್ಚಿಕೊಂಡಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಸೋಫಿ ಎಕ್ಲೆಸ್ಟೋನ್, ಚಾರ್ಲಿ ಡೀನ್ ಹಾಗೂ ಕೇಟ್ ಕ್ರಾಸ್ ಆಕರ್ಷಕ ಬೌಲಿಂಗ್ ಪ್ರದರ್ಶನ ತೋರುತ್ತಿದ್ದು, ಇಂದು ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.
ಪಂದ್ಯ: ಸಂಜೆ 6.30ಕ್ಕೆ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕಿವೀಸ್ಗೆ ಗೆಲುವು
ಕೇಪ್‌ಟೌನ್: ಐಸಿಸಿ ಮಹಿಳಾ ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ಮೊದಲ ಗೆಲುವು ಸಾಧಿಸಿದೆ. ಶುಕ್ರವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ತಂಡ 71 ರನ್ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 20 ಓವರಲ್ಲಿ 3 ವಿಕೆಟ್ಗೆ 189 ರನ್ ಕಲೆಹಾಕಿತು. ಸೂಜಿ ಬೇಟ್ಸ್ 81, ಮ್ಯಾಡಿ ಗ್ರೀನ್ 44, ಬೆರ್ನಾಡಿನ್ 44 ರನ್ ಗಳಿಸಿದರು. ಬೃಹತ್ ಮೊತ್ತ ಬೆನ್ನತ್ತಿದ ಬಾಂಗ್ಲಾ 118 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಐರ್ಲೆಂಡ್ ಮಣಿಸಿ ಗೆಲುವಿನ ಖಾತೆ ತೆರೆದ ವೆಸ್ಟ್ ಇಂಡೀಸ್:
ಕೇಪ್‌ಟೌನ್: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವು ಸತತ ಎರಡು ಸೋಲಿನ ಬಳಿಕ ಕೊನೆಗೂ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಐರ್ಲೆಂಡ್ ಎದುರು ಒಂದು ಎಸೆತ ಬಾಕಿ ಇರುವಂತೆಯೇ ವೆಸ್ಟ್ ಇಂಡೀಸ್ ಮಹಿಳಾ ತಂಡವು 6 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಿತ್ತು. ಇನ್ನು ಈ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ನಾಯಕಿ ಹೀಲೆ ಮ್ಯಾಥ್ಯೂವ್ಸ್ ಬಾರಿಸಿದ ಅಜೇಯ ಅರ್ಧಶತಕದ ನೆರವಿನಿಂದ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.