ಮಲಯಾಳಂ ಯುವ ನಿರ್ದೇಶಕ ಜೊಸೆಫ್ ಮನು ಜೇಮ್ಸ್ ನಿಧನ

ಮಲಯಾಳಂ ಸಿನಿಮಾ ರಂಗದ ಯುವ ನಿರ್ದೇಶಕ, ಬಾಲನಟನಾಗಿ ಸಿನಿಮಾ ರಂಗಕ್ಕೆ ಪ್ರವೇಶ ಪಡೆದಿದ್ದ ಜೊಸೆಫ್ ಮನು ಜೇಮ್ಸ್ ನಿಧನರಾಗಿದ್ದಾರೆ. ಕೇವಲ 31 ವರ್ಷದ ಈ ಯುವ ನಿರ್ದೇಶಕ ಹೆಪಟೈಟಿಸ್ ನಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಹಲವು ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ನಿಧನರಾಗಿದ್ದಾರೆ.
ಜೊಸೆಫ್ ಐ ಆ್ಯಮ್ ಕ್ಯೂರಿಯಸ್ ಸಿನಿಮಾದ ಮೂಲಕ ಬಾಲನಟರಾಗಿ ಸಿನಿಮಾ ರಂಗ ಪ್ರವೇಶ ಮಾಡಿದ್ದರು. ಹಲವಾರು ಸಿನಿಮಾಗಳಲ್ಲೂ ನಟಿಸಿದ್ದಾರೆ. ಅಲ್ಲದೇ, ಹಿಂದಿ, ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಿಗೆ ಇರವು ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಮೊದಲ ಬಾರಿಗೆ ಅವರು ನಿರ್ದೇಶಕರಾಗಿ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದು, ಆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಇತ್ತೀಚೆಗಷ್ಟೇ ಜೊಸೆಫ್ ಸ್ವತಂತ್ರ ನಿರ್ದೇಶಕರಾಗಿ ಸಿನಿಮಾವೊಂದನ್ನು ಮಾಡಿದ್ದರು. ನಾನ್ಸಿ ರಾಣಿ ಹೆಸರಿನಲ್ಲಿ ತಯಾರಾಗಿದ್ದ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಿದೆ. ಮೊದಲ ಚಿತ್ರದ ಬಿಡುಗಡೆ ಮುನ್ನವೇ ಜೊಸೆಫ್ ಇಹಲೋಕ ತ್ಯಜಿಸಿದ್ದಾರೆ. ಯುವ ನಿರ್ದೇಶಕನ ಸಾವು ಚಿತ್ರೋದ್ಯಮಕ್ಕೆ ಆಘಾತ ಮೂಡಿಸಿದೆ. ಅಗಲಿದ ನಿರ್ದೇಶಕನಿಗೆ ಚಿತ್ರೋದ್ಯಮ ಸಂತಾಪ ಸೂಚಿಸಿದೆ.