ಮನಾಲಿ ಚಳಿಯಲ್ಲಿ ಸತೀಶ್ ನೀನಾಸಂ ಜೊತೆ ಹೆಜ್ಜೆ ಹಾಕಿದ ಅದಿತಿ
ಕನ್ನಡದ ಹೆಸರಾಂತ ನಟ ಸತೀಶ್ ನೀನಾಸಂ (Satish Ninasam) ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ನಟನೆಯ ಸಾಲು ಸಾಲು ಚಿತ್ರಗಳು ಹಿಟ್ ಆಗುತ್ತಿದ್ದಂತೆಯೇ ಬಹುಬೇಡಿಕೆಯ ನಟರಾಗಿದ್ದಾರೆ. ಹಾಗಾಗಿ ಅವರ ಕೈಲಿ ಇದೀಗ ನಾಲ್ಕೈದು ಚಿತ್ರಗಳು ಇವೆ. ಒಂದೊಂದೇ ಶೂಟಿಂಗ್ ಮುಗಿಸುತ್ತಿದ್ದಾರೆ. ಸದ್ಯ ಮ್ಯಾಟ್ನಿ (Matney) ಸಿನಿಮಾದ ಹಾಡಿನ ಚಿತ್ರೀಕರಣದಲ್ಲಿ ಅವರು ಬ್ಯುಸಿಯಾಗಿದ್ದು ಶೂಟಿಂಗ್ ಗಾಗಿ ಮನಾಲಿಗೆ (Manali) ಪ್ರಯಾಣ ಬೆಳೆಸಿದ್ದಾರೆ.
ಸದ್ಯ ಮನಾಲಿಯಲ್ಲಿ ಮ್ಯಾಟ್ನಿ ಸಿನಿಮಾದ ಹಾಡೊಂದರ ಚಿತ್ರೀಕರಣ ನಡೆಯುತ್ತಿದ್ದು, ಈ ಹಾಡಿನಲ್ಲಿ ಸತೀಶ್ ಜೊತೆ ಅದಿತಿ ಪ್ರಭುದೇವ್ (Aditi Prabhudev) ಹೆಜ್ಜೆ ಹಾಕುತ್ತಿದ್ದಾರೆ. ಇದೊಂದು ರೋಮ್ಯಾಂಟಿಕ್ ಗೀತೆಯಾಗಿದ್ದು, ಕೊರವ ಚಳಿಯಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಹಿಮದ ಮಧ್ಯೆ ಈ ಜೋಡಿ ಹಾಡಿಗೆ ಹೆಜ್ಜೆ ಹಾಕುತ್ತಿದೆ.
ಶೂಟಿಂಗ್ ಕುರಿತಾಗಿ ಮಾತನಾಡಿರುವ ಸತೀಶ್, ‘ಈ ಸಿನಿಮಾದ ಅಷ್ಟೂ ಹಾಡುಗಳು ವಿಶೇಷವಾಗಿ ಮೂಡಿ ಬಂದಿವೆ. ರಚಿತಾ (Rachita Ram) ಮತ್ತು ನಾನು ಈ ಹಿಂದೆ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದೆವು. ಆ ಹಾಡು ಕೂಡ ಅದ್ಧೂರಿಯಾಗಿ ಮೂಡಿ ಬಂದಿದೆ. ಇದೀಗ ಅದಿತಿ ಜೊತೆ ಮತ್ತೊಂದು ಹಾಡಿಗೆ ಹೆಜ್ಜೆ ಹಾಕಿರುವೆ. ಮನಾಲಿಯಲ್ಲಿ ಈವರೆಗೂ ಯಾರೂ ಹೋಗಿರದೇ ಇರುವಂಥ ಸ್ಥಳದಲ್ಲಿ ಶೂಟ್ ಮಾಡಲಾಗಿದೆ. ಮೈನಸ್ ಚಳಿ ಇತ್ತು. ಹಿಮ ಬೀಳುತ್ತಿತ್ತು. ಅದೊಂದು ಅದ್ಭುತ ಅನುಭವ’ ಎನ್ನುತ್ತಾರೆ.
ಈ ಸಿನಿಮಾದ ಮತ್ತೊಂದು ಹಾಡಿದ್ದು, ಆ ಹಾಡಿನ ಚಿತ್ರೀಕರಣದ ನಂತರ ಮ್ಯಾಟ್ನಿ ಸಂಪೂರ್ಣ ಶೂಟಿಂಗ್ ಮುಗಿಸಲಿದೆ. ಈ ಸಿನಿಮಾವನ್ನು ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡುತ್ತಿದ್ದು, ಪಾರ್ವತಿ ನಿರ್ಮಾಪಕರು. ಪೂರ್ಣ ಚಂದ್ರ ತೇಜಸ್ವಿ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿದೆ. ಶಿವರಾಜ್ ಕೆ.ಆರ್ ಪೇಟೆ ಸೇರಿದಂತೆ ನುರಿತ ಕಲಾವಿದರೇ ತಾರಾಗಣದಲ್ಲಿ ಇದ್ದಾರೆ.