ಬೆಂಗಳೂರು: ಗ್ಯಾಸ್ ಸಿಲಿಂಡರ್ ಕಳ್ಳತನ, ಇಬ್ಬರ ಬಂಧನ

ಬೆಂಗಳೂರು, ಆಗಸ್ಟ್ 26: ನಗರದ ವಿವಿಧ ಭಾಗಗಳಲ್ಲಿ ಸರಣಿ ಗ್ಯಾಸ್ ಸಿಲಿಂಡರ್ (gas cylinders) ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬೆಂಗಳೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಲೋಕೇಶ್ ಮತ್ತು ಹೇಮಂತ್ ಬಂಧಿತರು.
ಗೋವಿಂದರಾಜ ನಗರ, ರಾಜಾಜಿ ನಗರ, ಕಾಮಾಕ್ಷಿ ಪಾಳ್ಯ, ಮಾಗಡಿ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಬಂಧಿತರಿಂದ ಕಳ್ಳತನ ಮಾಡಿದ 20 ಗ್ಯಾಸ್ ಸಿಲಿಂಡರ್ಗಳನ್ನು ಜಪ್ತಿ ಮಾಡಲಾಗಿದೆ. ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮಾಡಲಾಗುತ್ತಿದೆ.
ನಗರದ ಹೊರವಲಯದಲ್ಲಿರುವ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಇವರು, ಮೊದಲು ಪಕ್ಕಾ ಪ್ಲ್ಯಾನ್ ಮಾಡಿ ನಂತರ ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡಿ, ಅದನ್ನು ಬೈಕ್ ಮೂಲಕ ಸಾಗಿಸುತ್ತಿದ್ದರು. ಲೋಕೇಶ್ ಈ ಹಿಂದೆ ಕೂಡ ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡಿ ಜೈಲಿಗೆ ಹೋಗಿಬಂದಿದ್ದು, ಮತ್ತೆ ಅದೇ ಕೆಲಸ ಮಾಡುತ್ತಿದ್ದ.
ತಾಯಿಯ ಸಮಾಧಿ ಪಕ್ಕದಲ್ಲೇ ಯುವಕ ನೇಣಿಗೆ ಶರಣು:
ಕೋಲಾರ: ಮರಕ್ಕೆ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀನಿವಾಸಪುರದ (Srinivaspur) ತಾಡಿಗೋಳ್ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಗ್ರಾಮದ ಪ್ರವೀಣ್ (22) ಎಂದು ಗುರುತಿಸಲಾಗಿದೆ. ಮೃತ ಯುವಕ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಸಂಬಂಧಿಕರ ಮದುವೆಗೆಂದು ಕೆಲವು ದಿನಗಳ ಹಿಂದೆ ಊರಿಗೆ ಮರಳಿದ್ದ. ಇಂದು ತನ್ನ ತಾಯಿಯ ಸಮಾಧಿಯ ಬಳಿಯೇ ಇದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಈ ಸಂಬಂಧ ಗೌನಿಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.