ಬಂಟ್ವಾಳ: ಬರೋಬ್ಬರಿ 4.33 ಲಕ್ಷ ರೂ.ಗೆ ಹಲಸು ಏಲಂ!
ಬಂಟ್ವಾಳ: ಧಾರ್ಮಿಕ ಕ್ಷೇತ್ರಗಳಿಗೆ ಸಮರ್ಪಣೆಗೊಂಡ ಸುವಸ್ತು ಗಳನ್ನು ಏಲಂ ಮಾಡುವುದು ಸಾಮಾನ್ಯವಾಗಿದ್ದು, ಈ ವೇಳೆ ಭಕ್ತರು ವಸ್ತುವಿನ ಮೌಲ್ಯಕ್ಕಿಂತ ಹೆಚ್ಚಿನ ದರ ಕೊಟ್ಟು ಅದನ್ನು ಪ್ರಸಾದ ರೂಪದಲ್ಲಿ ಪಡೆಯುತ್ತಾರೆ. ಮೂಲರಪಟ್ನ ಮಸೀದಿಯಲ್ಲಿ ಹಲಸಿನ ಹಣ್ಣೊಂದನ್ನು ವ್ಯಕ್ತಿಯೊಬ್ಬರು ಏಲಂನಲ್ಲಿ ಬರೋಬ್ಬರಿ 4.33 ಲಕ್ಷ ರೂ.ಗಳಿಗೆ ಪಡೆಯುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ.
ಮೂಲರಪಟ್ಣ ನವೀಕೃತ ಮಸೀದಿಯ ಉದ್ಘಾಟನೆಯ ಹಿನ್ನೆಲೆಯಲ್ಲಿ ಧಾರ್ಮಿಕ ಪ್ರಭಾಷಣವನ್ನು ಆಯೋಜಿಸಲಾಗಿದ್ದು, ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಅವರ ಉಪನ್ಯಾಸದ ಬಳಿಕ ಮಸೀದಿಗೆ ಅರ್ಪಣೆಯಾಗಿದ್ದ ಹಲಸನ್ನು ಏಲಂ ಮಾಡುವುದಕ್ಕೆ ಅವರೇ ಪ್ರಾರಂಭಿಸಿದರು.
ಈ ವೇಳೆ ಸ್ಥಳೀಯ ಪ್ರಮುಖರಾದ ಅಝೀಝ್ ಹಾಗೂ ಲತೀಫ್ ಅವರ ಮಧ್ಯೆ ತೀವ್ರ ಪೈಪೋಟಿ ನಡೆದು ಕೊನೆಗೆ ಹಲಸು 4,33,333 ರೂ.ಗಳಿಗೆ ಲತೀಫ್ ಅವರ ಪಾಲಾಯಿತು. ಇದರ ಏಲಂ ಪ್ರಕ್ರಿಯೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇಷ್ಟೊಂದು ದೊಡ್ಡ ಮೊತ್ತಕ್ಕೆ ಹಲಸು ಏಲಂ ಆಗಿರುವುದಕ್ಕೆ ಅಚ್ಚರಿ ವ್ಯಕ್ತವಾಗುತ್ತಿದೆ.
ಇದರ ಜತೆಗೆ ಇತರ ಅನೇಕ ಸುವಸ್ತುಗಳು ಏಲಂ ಆಗಿ ಉತ್ತಮ ಮೊತ್ತ ಲಭಿಸಿದ್ದು, ಎಲ್ಲ ಮೊತ್ತವನ್ನು ಆಡಳಿತ ಸಮಿತಿಗೆ ಹಸ್ತಾಂತರಿಸಲಾಗಿದೆ ಎಂದು ಮಸೀದಿಯ ಮೂಲಗಳು ತಿಳಿಸಿವೆ.