ಪ್ರಿಯಾಂಕಾ ಗಾಂಧಿ ಪಿಎ ವಿರುದ್ಧ ಬಿಗ್ ಬಾಸ್ ಮಹಿಳಾ ಸ್ಪರ್ಧಿ ಗಂಭೀರ ಆರೋಪ

ಬಿಗ್ ಬಾಸ್ (Bigg Boss) ಹಿಂದಿ ಸೀಸನ್ 16ರ ಟಾಪ್ ಕಂಟೆಸ್ಟಂಟ್ ಅರ್ಚನಾ ಗೌತಮ್ (Archana Gautam) , ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರ ಪಿಎ ಸಂದೀಪ್ ಸಿಂಗ್ (Sandeep Singh) ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಅರ್ಚನಾ ಗೌತಮ್, ತಮ್ಮ ಪಕ್ಷದವರ ವಿರುದ್ಧವೇ ಗಂಭೀರ ಆರೋಪ ಮಾಡಿದ್ದು, ಪ್ರಿಯಾಂಕಾ ಅವರ ಪಿಎ ವಿರುದ್ಧ ಎಫ್.ಐ.ಆರ್ ಕೂಡ ದಾಖಲಾಗಿದೆ.
ಕಾಂಗ್ರೆಸ್ ಸಮಾವೇಶಕ್ಕೆ ಸಂಬಂಧಿಸಿದಂತೆ ಅರ್ಚನಾಗೆ ಭೇಟಿಯಾಗುವಂತೆ ಪ್ರಿಯಾಂಕಾ ಗಾಂಧಿ ಆಹ್ವಾನ ನೀಡಿದ್ದರಂತೆ. ಈ ಆಹ್ವಾನದ ಹಿನ್ನೆಲೆಯಲ್ಲಿ ಅರ್ಚನಾ ರಾಯಪುರಕ್ಕೆ ತೆರಳಿದ್ದಾರೆ. ಪ್ರಿಯಾಂಕಾ ಅವರನ್ನು ಭೇಟಿ ಮಾಡಿಸಲು ಅವರ ಪಿಎಗೆ ಅರ್ಚನಾ ಕೇಳಿಕೊಂಡರಂತೆ. ಅವಕಾಶ ನೀಡಲಿಲ್ಲ ಎಂದು ಅರ್ಚನಾ ಅಸಮಾಧಾನಗೊಂಡಿದ್ದರೆ. ಈ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಪ್ರಿಯಾಂಕಾ ಪಿಎ ಕೆಟ್ಟ ಶಬ್ದಗಳಲ್ಲಿ ನಿಂದಿಸಿದ್ದಾರಂತೆ. ಅಲ್ಲದೇ, ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಅರ್ಚನಾ.
ಈ ಕುರಿತು ಅರ್ಚನಾ ತಂದೆ ಗೌತಮ್ ಬುದ್ಧ ದೂರು ನೀಡಿದ್ದು, ಆ ದೂರಿನಲ್ಲಿ ‘ನನ್ನ ಮಗಳ ವಿರುದ್ಧ ಜಾತಿನಿಂದನೆ ಮಾಡಲಾಗಿದೆ. ಕೆಟ್ಟ ಶಬ್ದಗಳಲ್ಲೂ ಸಂದೀಪ್ ಬೈದಿದ್ದಾರೆ. ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಕುರಿತಾಗಿ ಮೀರತ್ ನಲ್ಲಿ ದೂರು ದಾಖಲಿಸಿದ್ದೇವೆ’ ಅಂದಿದ್ದಾರೆ. ದೂರನ್ನು ಸ್ವೀಕರಿಸಿರುವ ಎಸ್.ಪಿ ಪಿಯುಷ್ ಸಿಂಗ್ ಎಫ್.ಐ.ಆರ್ ದಾಖಲಿಸಿದ್ದಾರೆ.
ಅರ್ಚನಾ ಗೌತಮ್ ಒಬ್ಬ ಪ್ರತಿಷ್ಠಿತ ಮಾಡಲ್. ಈಗಾಗಲೇ ಮಿಸ್ ಬಿಕಿನಿ ಇಂಡಿಯಾ, ಮಿಸ್ ಉತ್ತರ ಪ್ರದೇಶ ಕಿರೀಟ ತೊಟ್ಟವರು. ಹಲವು ಚಿತ್ರಗಳಲ್ಲೂ ನಟಿಸಿದ್ದಾರೆ. ಹಿಂದಿ ಬಿಗ್ ಬಾಸ್ ಸೀಸನ್ 16ರಲ್ಲಿ ಟಾಪ್ ಲಿಸ್ಟ್ ನಲ್ಲೂ ಕಾಣಿಸಿಕೊಂಡಿದ್ದರು. ಮೂರನೇ ರನ್ನರ್ ಅಪ್ ಆದವರು. ಅಲ್ಲದೇ, ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಕಳೆದ ಬಾರಿ ಉತ್ತರ ಪ್ರದೇಶದಲ್ಲಿ ಚುನಾವಣೆಗೂ ಸ್ಪರ್ಧೆ ಮಾಡಿದ್ದರು.