ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತ. ಟಿಂಬರ್ ಮಾಫಿಯಾ, ಮೈನಿಂಗ್, ದೊಡ್ಡ ರೆಸಾರ್ಟ್ ಗಳನ್ನು ಬಿಟ್ಟು ಕೇವಲ ಸಣ್ಣ ಹೋಂ ಸ್ಟೇ ಗಳ ಮೇಲೆ ಕೆಂಗಣ್ಣು ಸರಿಯೇ?
ಪಶ್ಚಿಮ ಘಟ್ಟಗಳಲ್ಲಿ ಭೂಕುಸಿತ: ಬಹಳಷ್ಟು ಸೂಕ್ಷ್ಮವಾಗಿರುವ ಪಶ್ಚಿಮ ಘಟ್ಟದಲ್ಲಿ ಪದೇ ಪದೇ ಭೂಕುಸಿತಗಳು ಸಂಭವಿಸುತ್ತಿವೆ. ಅದರಲ್ಲೂ ಕೇರಳ ಹಾಗೂ ಕರ್ನಾಟಕದಲ್ಲಿ ಪದೇಪದೇ ಸಂಭವಿಸುತ್ತಿರುವ ಭೂಕುಸಿತಕ್ಕೆ ಟಿಂಬರ್ ಮಾಫಿಯಾ ಹಾಗೂ ದೊಡ್ಡ ದೊಡ್ಡ ರೆಸಾರ್ಟ್ ಗಳು ಮುಖ್ಯ ಕಾರಣ ಎಂದು ಪರಿಸರ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.
ಸರ್ಕಾರ ಟಿಂಬರ್ ಮಾಫಿಯಾ, ಮೈನಿಂಗ್ ಮತ್ತು ದೊಡ್ಡ ದೊಡ್ಡ ರೆಸಾರ್ಟ್ ಗಳನ್ನು ನಿಯಂತ್ರಿಸಬೇಕು ಎಂಬುದು ಪರಿಸರ ಪ್ರಿಯರ ಆಗ್ರಹ.
ಎಕ್ಕರೆಗಟ್ಟಲೆ ಭೂಮಿಯನ್ನು ಭೂ ಪರಿವರ್ತನೆ ಮಾಡಿಸಿ ಎಕ್ಕರೆಗಟ್ಟಲೆ ಭೂಮಿಯಲ್ಲಿ ರೆಸಾರ್ಟ್ ನಿರ್ಮಿಸಿ, ಈಜುಕೊಳಗಗಳನ್ನು ನಿರ್ಮಿಸಿದವರ ಮೇಲೆ ಸರಕಾರ ಗಮನಹರಿಸಬೇಕು ಎಂದು ಪರಿಸರ ಪ್ರಿಯರು ಆಗ್ರಹಿಸುತ್ತಲೆ ಬಂದಿದ್ದಾರೆ. ಅಲ್ಲದೆ ಮೈನಿಂಗ್ ಕೂಡ ಪಶ್ಚಿಮ ಘಟ್ಟದಲ್ಲಿ ಬಹುದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಅದರ ಬಗ್ಗೆ ಗಮನ ಹರಿಸದೆ ಕೇವಲ ಸಣ್ಣ ಹೋಂ ಸ್ಟೇ ಗಳು ಕಾರಣ ಎಂದು ಹೇಳುತ್ತಿರುವುದು ಎಷ್ಟು ಸರಿ ಎಂಬುದನ್ನು ಪರಿಸರ ತಜ್ಞರು, ಪ್ರಶ್ನಿಸುತ್ತಿದ್ದಾರೆ.
ಈ ಬಗ್ಗೆ ಇಂಗ್ಲಿಷ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಖ್ಯಾತ ಪರಿಸರ ತಜ್ಞ ಮಾಧವ ಗಾಡ್ಗಿಲ್ (Madhav Gadgil) ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಣ್ಣ ಹೋಂ ಸ್ಟೇಗಳಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ನಿಜವಾದ ಸಮಸ್ಯೆ ಇರುವುದು ರೆಸಾರ್ಟ್, ಮೈನಿಂಗ್ ಹಾಗೂ ಟಿಂಬರ್ ಮಾಫಿಯಾ ಗಳಿಂದ ಎಂಬುದು ಅವರ ವಾದ.
ಇಡೀ ಕಾಡನ್ನು ಬರಿದು ಮಾಡುವ ಈ ಟಿಂಬರ್ ಮಾಫಿಯಾ, ಮೈನಿಂಗ್ ಹಾಗೂ ರೆಸಾರ್ಟ್ ಗಳ ಬಗ್ಗೆ ಸರಕಾರ ಮೃದು ಧೋರಣೆಯನ್ನು ತಾಳಿದೆ ಎಂದು ಅವರು ಆರೋಪಿಸಿದ್ದಾರೆ.
ನಿಜವಾಗಲೂ ಟಿಂಬರ್ ಮಾಫಿಯ ಹಾಗೂ ರೆಸಾರ್ಟ್ಗಳು ಇಡೀ ಪಶ್ಚಿಮ ಘಟ್ಟವನ್ನು ಹಾಳು ಮಾಡುತ್ತಿರುವುದು ನಿಜವಾದ ಸತ್ಯವಾಗಿದೆ. ಆದರೆ ಸರ್ಕಾರ ಅದನ್ನು ಬಿಟ್ಟು ಸಣ್ಣ ಹೋಂ ಸ್ಟೇ ಗಳ ಬಗ್ಗೆ ಕೆಂಗನ್ನು ಬೀರುತ್ತಿರುವುದು ವಿಷಯವನ್ನು ಬೇರೆ ಕಡೆಗೆ ತಿರುಗಿಸುತ್ತಿರುವುದ ಬಗ್ಗೆ ಸ್ಪಷ್ಟವಾಗಿದೆ ಎಂದು ಪರಿಸರ ತಜ್ಞರ ಅಭಿಪ್ರಾಯ ಪಡುತ್ತಾರೆ.
ಪರಿಸರ ತಜ್ಞ ಮಾಧವ್ ಗಾಡ್ಗಿಲ್ ರವರ ಪ್ರಕಾರ ದೊಡ್ಡ ದೊಡ್ಡ ರೆಸಾರ್ಟ್ ಗಳನ್ನು ನಿರ್ಮಿಸುವುದರಿಂದ ಅಲ್ಲಿಯ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಟಿಂಬರ್ ಮಾಫಿಯಾ ಇಡೀ ಪಶ್ಚಿಮ ಘಟ್ಟವನ್ನು ಬರಿದು ಮಾಡುತ್ತಿದೆ. ಮೈನಿಂಗ್ ಪಶ್ಚಿಮ ಘಟ್ಟವನ್ನು ಕೊರೆಯುತ್ತಿದೆ. ಅದನ್ನು ಬಿಟ್ಟು ಹೋಂಸ್ಟೇಗಳ ಮೇಲೆ ಮಾತನಾಡುತ್ತಿರುವುದು ವಿಷಯವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಎಂದು ಅಭಿಪ್ರಾಯ ಪಡುತ್ತಾರೆ.
ಹೋಂ ಸ್ಟೇಗಳಿಂದ ದೊಡ್ಡ ಸಮಸ್ಯೆ ಇಲ್ಲ ಆದರೆ ಗುಡ್ಡದ ಮೇಲೆ ನಿರ್ಮಾಣವಾಗಿರುವ ಹೋಂ ಸ್ಟೇ ಗಳ ನಿಷೇಧವಾಗಬೇಕು ಹಾಗೂ ದೊಡ್ಡ ರೆಸಾರ್ಟ್ ಗಳಿಗೆ ಕಡಿವಾಣ ಹಾಕಬೇಕು ಎಂದು ಪರಿಸರ ತಜ್ಞರು ಅಭಿಪ್ರಾಯ ಪಡುತ್ತಾರೆ.
ಮಾಧವ್ ಗಾಡ್ಗೀಳ್ ವರದಿಯಲ್ಲಿದ್ದ ಕರ್ನಾಟಕದ ತಾಲೂಕುಗಳಿವು
ಕರ್ನಾಟಕದ ಚಿಕ್ಕಮಗಳೂರು, ಬೆಳಗಾವಿ, ಚಾಮರಾಜನಗರ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ತಾಲೂಕುಗಳು ಈ ಪಟ್ಟಿಯಲ್ಲಿದ್ದವು.
ಕೇರಳದ ವಯನಾಡ್‌ನಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಪದೇ ಪದೇ ಗುಡ್ಡ ಕುಸಿತ ಉಂಟಾಗುತ್ತಿದ್ದು, ಈ ಬಗ್ಗೆ 14 ವರ್ಷಗಳ ಹಿಂದೆಯೇ ಮಾಧವ ಗಾಡ್ಗೀಳ್ ಎಚ್ಚರಿಕೆ ನೀಡಿದ್ದರು. ಮಾಧವ್ ಗಾಡ್ಗೀಳ್ ಅವರು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಕರ್ನಾಟಕದ ಹಲವು ತಾಲೂಕುಗಳನ್ನು ಸಹ ಪರಿಸರ ಸೂಕ್ಷ್ಮ ಪರಿಸರವೆಂದು ಉಲ್ಲೇಖಿಸಿದ್ದರು. ಹಾಗಿದ್ದರೆ ಅವು ಯಾವ ಜಿಲ್ಲೆಯ ಯಾವ ತಾಲೂಕುಗಳು? ಈ ಕುರಿತು ವಿವರ ಇಲ್ಲಿದೆ.
ಮಾಧವ್ ಗಾಡ್ಗೀಳ್ ನೇತೃತ್ವದ ಸಮಿತಿಯು ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳು ಮತ್ತು ವಲಯಗಳನ್ನು ವರ್ಗೀಕರಿಸಲು ಪ್ರಸ್ತಾಪನೆಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.
ಪರಿಸರ ಸೂಕ್ಷ್ಮ ವಲಯಗಳು – I ಮತ್ತು ಪರಿಸರ ಸೂಕ್ಷ್ಮ ವಲಯಗಳು – II ಪ್ರದೇಶಗಳನ್ನಾಗಿ ವಿಂಗಡಿಸಿ ಕೆಲವು ನಿಬಂಧನೆಗಳು ವಿಧಿಸಲಾಗಿತ್ತು.
ಕರ್ನಾಟಕದ ಚಿಕ್ಕಮಗಳೂರು, ಬೆಳಗಾವಿ, ಚಾಮರಾಜನಗರ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ತಾಲೂಕುಗಳು ಈ ಪಟ್ಟಿಯಲ್ಲಿದ್ದವು.
ತಾಲೂಕುವಾರು ನೋಡುವುದಾದರೆ ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಅಂಕೋಲಾ, ಕಾರವಾರ, ಯಲ್ಲಾಪುರ, ಜೋಯ್ಡಾ, ತೀರ್ಥಹಳ್ಳಿ, ಹೊಸನಗರ, ಸಾಗರ, ಶಿವಮೊಗ್ಗ, ಸೊರಬ, ಕಾರ್ಕಳ, ಕುಂದಾಪುರ ತಾಲೂಕುಗಳು ವರದಿಯಲ್ಲಿದ್ದವು.
ಬೆಳಗಾವಿ, ಖಾನಾಪುರ, ಕೊಳ್ಳೇಗಾಲ, ಗುಂಡ್ಲುಪೇಟೆ, ಯೆಳಂದೂರು, ನರಸಿಂಹರಾಜಪುರ, ತರೀಕೆರೆ, ಮೂಡಿಗೆರೆ, ಕೊಪ್ಪ, ಶೃಂಗೇರಿ, ಚಿಕ್ಕಮಗಳೂರು, ಕಡೂರು, ಬೆಳ್ತಂಗಡಿ, ಸುಳ್ಯ, ಪುತ್ತೂರು, ಭದ್ರಾವತಿ, ಸಕಲೇಶಪುರ, ಹೊಳೆನರಸಿಪುರ, ಬೇಲೂರು, ಆಲೂರು, ಅರಕಲಗೂಡು, ಸೋಮವಾರಪೇಟೆ, ವಿರಾಜಪೇಟೆ, ಮಡಿಕೇರಿ, ಹೆಗ್ಗಡದೇವನಕೋಟೆ, ಪರಿಯಾಪಟ್ಟಣ, ಹುಣಸೂರು ತಾಲೂಕುಗಳ ವರದಿಯಲ್ಲಿದ್ದವು.
ಮಾಧವ್ ಗಾಡ್ಗೀಳ್ ವರದಿಯನ್ನು ನಿರ್ಲಕ್ಷಿಸಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಗುಡ್ಡ-ಭೂ ಕುಸಿತಗಳನ್ನು ತಡೆಯಬಹುದಾಗಿದ್ದ ಅವಕಾಶವನ್ನು ಸರ್ಕಾರಗಳು ಕೈಚೆಲ್ಲಿವೆ ಎಂಬ ಆರೋಪ ಕೇಳಿಬಂದಿದೆ.