ನನ್ನ ಬಳಿ 120 ಸಾಕ್ಷ್ಯಗಳಿವೆ; ಮೂರನೇ ವ್ಯಕ್ತಿಗಾಗಿ ಪಕ್ಷ ಬಿಡಬೇಡಿ ಎಂದು ಡಿಕೆ ಶಿವಕುಮಾರ್ ಪತ್ನಿ ಹೇಳಿದ್ದರು: ರಮೇಶ್ ಜಾರಕಿಹೊಳಿ
ಬೆಳಗಾವಿ: ಸಿಡಿ ಪ್ರಕರಣದಿಂದಾಗಿ ಸಚಿವ ಸ್ಥಾನ ಕಳೆದುಕೊಂಡಿರುವ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಇಂದು ಮತ್ತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿದ್ದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಮತ್ತು ಡಿ.ಕೆ ಶಿವಕುಮಾರ್ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದೆವು. ನಮ್ಮಿಬ್ಬರಿಗೂ ಒಳ್ಳೆಯ ಭವಿಷ್ಯವಿತ್ತು. ಗ್ರಾಮೀಣ ಶಾಸಕಿಯಿಂದ ನನ್ನ ಸಂಬಂಧ ಹಾಳಾಯಿತು. ಮುಂದೆ ಕಾಂಗ್ರೆಸ್ ಸರ್ವನಾಶವಾಗುವುದು ವಿಷಕನ್ಯೆಯಿಂದಲೇ ಎಂದಿದ್ದಾರೆ.
ಇದೇ ವೇಳೆ ನಾನು ಪಕ್ಷ ಬಿಡುವ ನಿರ್ಧಾರ ಮಾಡಿದ್ದಾಗ ಡಿಕೆ ಶಿವಕುಮಾರ್ ಅವರ ಧರ್ಮಪತ್ನಿ ಉಷಾ ಅವರು ನನ್ನ ಬಳಿ ಬಂದು ಅಣ್ಣ ನೀವು ಪಕ್ಷ ಬಿಡಬೇಡಿ ಎಂದು ಮನವಿ ಮಾಡಿದರು. ಅದಕ್ಕೆ ನಾನು ನಿಮ್ಮ ಗಂಡ ಸರಿಯಿಲ್ಲ, ನಾನು ಪಕ್ಷ ಬಿಡುತ್ತೇನೆ ಎಂದಿದ್ದಾಗಿ ಹೇಳಿದರು.
ನನ್ನ ವಿರುದ್ಧ ಷಡ್ಯಂತ್ರ ನಡೆಸಿದ ಡಿ.ಕೆ ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸಬೇಕು. ಸಿಬಿಐ ಸಂಪೂರ್ಣವಾಗಿ ವಿಚಾರಣೆ ನಡೆಸಬೇಕು ಎಂದಿದ್ದಾರೆ. ಒಬ್ಬ ವ್ಯಕ್ತಿಯ ರಾಜಕೀಯ ಜೀವನವನ್ನು ಹಾಳು ಮಾಡಲು ಸಿಡಿ ಬಳಕೆ ಮಾಡಿದ ಆತ ರಾಜಕಾರಣದಲ್ಲಿ ಇರಲು ನಾಲಾಯಕ್ ಎಂದು ವಾಗ್ದಾಳಿ ನಡೆಸಿದ್ದಾರೆ. ನನ್ನ ಬಳಿ ಹಲವು ದಾಖಲೆಗಳಿವೆ, ತನಿಖೆಗಾಗಿ ನಾನು ಸಿಬಿಐಗೆ ನೀಡುತ್ತೇನೆ ಎಂದಿದ್ದಾರೆ.
ಟಾರ್ಗೆಟ್ ಮಾಡಿ ನನ್ನನ್ನು ಹೊಡೆದರಲ್ಲ ಡಿಕೆಶಿ. ಕಳೆದ ಒಂದೂವರೆ ವರ್ಷದಿಂದ ನಾನು ಕಾಯುತ್ತಿದ್ದೇನೆ. ರಾಜಕಾರಣ ಮಾಡಲು ಡಿ.ಕೆ.ಶಿವಕುಮಾರ್ ನಾಲಾಯಕ್. ನನ್ನ ಬಳಿ 120 ಸಾಕ್ಷ್ಯಗಳಿವೆ. ಯಾವುದನ್ನೂ ಬಿಡುಗಡೆ ಮಾಡಲ್ಲ. ಡಿ.ಕೆ ಶಿವಕುಮಾರ್ ಸಿಡಿ ತಯಾರಿಸಿ ಬ್ಯ್ಲಾಕ್ ಮೇಲ್ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ದಯವಿಟ್ಟು ಇದನ್ನು ಸಿಬಿಐ ತನಿಖೆ ಕೊಡಬೇಕು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಒತ್ತಾಯಿಸಿದ್ದಾರೆ.