ಧೋನಿ ಸಿಕ್ಸ್ – ಜಿಯೋ ಸಿನಿಮಾದಲ್ಲಿ ದಾಖಲೆ ಫಿಕ್ಸ್
ಚೆನ್ನೈ: ರಾಜಸ್ಥಾನ ರಾಯಲ್ಸ್ (Rajasthan Royals) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮಧ್ಯೆ ನಡೆದ ಐಪಿಎಲ್ (IPL) ಪಂದ್ಯ ಜಿಯೋ ಸಿನಿಮಾ (Jio Cinema) ಆಪ್‌ನಲ್ಲಿ ದಾಖಲೆ ಬರೆದಿದೆ.
ನಾಯಕ ಧೋನಿ (MS Dhoni) ಮತ್ತು ರವೀಂದ್ರ ಜಡೇಜಾ (Ravindra Jadeja) ಅವರು 20ನೇ ಓವರ್‌ನಲ್ಲಿ ಕ್ರೀಸ್‌ನಲ್ಲಿದ್ದರು. ಈ ವೇಳೆ ಜಿಯೋ ಸಿನಿಮಾದಲ್ಲಿ 2.2 ಕೋಟಿ ಮಂದಿ ವೀಕ್ಷಣೆ ಮಾಡುತ್ತಿದ್ದರು. ಇದು ಈವರೆಗೆ ಜಿಯೋ ಸಿನಿಮಾದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಐಪಿಎಲ್ ಪಂದ್ಯವಾಗಿದೆ.
ಈ ಹಿಂದೆ ಲಕ್ನೋ ವಿರುದ್ಧದ ಪಂದ್ಯದಲ್ಲಿ ಧೋನಿ ಬ್ಯಾಟಿಂಗ್ ಮಾಡುತ್ತಿದ್ದಾಗ 1.7 ಕೋಟಿ ಮಂದಿ ಜಿಯೋ ಸಿನಿಮಾವನ್ನು ವೀಕ್ಷಣೆ ಮಾಡುತ್ತಿದ್ದರು. ಇದು ಮೂರನೇ ಅತಿ ಹೆಚ್ಚು ವೀಕ್ಷಣೆ ಕಂಡ ಪಂದ್ಯವಾಗಿದೆ. ಈ ಪಂದ್ಯದಲ್ಲಿ 20ನೇ ಓವರ್‌ನಲ್ಲಿ ಕ್ರೀಸ್‌ಗೆ ಆಗಮಿಸಿದ ಧೋನಿ 3 ಎಸೆತದಲ್ಲಿ 2 ಸಿಕ್ಸರ್ ಸಿಡಿಸಿ ಔಟಾಗಿದ್ದರು.
2.2 crore tuning into JioCinema, Crores in TV, at the age of 41, he is a hope after playing his last International match in 2019.
— Johns. (@CricCrazyJohns) April 12, 2023
It has been more than a decade in Yellow, the trust & faith of fans is the greatness of MS. pic.twitter.com/z67wW8x6sB
ಅತಿ ಹೆಚ್ಚು ವೀಕ್ಷಣೆ ಕಂಡ ಪಂದ್ಯಗಳು
1. ಚೆನ್ನೈ ಸೂಪರ್ ಕಿಂಗ್ಸ್ Vs ರಾಜಸ್ಥಾನ ರಾಯಲ್ಸ್ – 2.2 ಕೋಟಿ
2. ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಲಕ್ನೋ ಸೂಪರ್ ಜೈಂಟ್ಸ್ – 1.8 ಕೋಟಿ
3. ಮುಂಬೈ ಇಂಡಿಯನ್ಸ್ Vs ಡೆಲ್ಲಿ ಕ್ಯಾಪಿಟಲ್ಸ್ – 1.7 ಕೋಟಿ
4. ಚೆನ್ನೈ ಸೂಪರ್ ಕಿಂಗ್ಸ್ Vs ಲಕ್ನೋ ಸೂಪರ್ ಜೈಂಟ್ಸ್ – 1.7 ಕೋಟಿ
5. ಚೆನ್ನೈ ಸೂಪರ್ ಕಿಂಗ್ಸ್ Vs ಗುಜರಾತ್ ಟೈಟಾನ್ಸ್ – 1.6 ಕೋಟಿ
ಇಷ್ಟೊಂದು ವೀಕ್ಷಣೆ ಯಾಕಾಯ್ತು?
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 8 ವಿಕೆಟ್ ನಷ್ಟಕ್ಕೆ 175 ರನ್ ಹೊಡೆದಿತ್ತು. ನಂತರ ಬ್ಯಾಟ್ ಮಾಡಿದ ಚೆನ್ನೈಗೆ ಕೊನೆಯ 18 ಎಸೆತಗಳಲ್ಲಿ 54 ರನ್ ಬೇಕಿತ್ತು. ಧೋನಿ ಮತ್ತು ಜಡೇಜಾ ಕ್ರೀಸ್‌ನಲ್ಲಿದ್ದರು. 18ನೇ ಓವರ್‌ನಲ್ಲಿ 14 ರನ್ ಬಂದಿದ್ದರೆ 19ನೇ ಓವರ್‌ನಲ್ಲಿ 19 ರನ್ ಬಂದಿತ್ತು. ಈ ಓವರ್‌ನಲ್ಲಿ ಜಡೇಜಾ 2 ಸಿಕ್ಸ್ ಸಿಡಿಸಿ ಪಂದ್ಯಕ್ಕೆ ರೋಚಕ ಟ್ವಿಸ್ಟ್ ನೀಡಿದರು.
ಕೊನೆಯ ಓವರ್‌ನಲ್ಲಿ 21 ರನ್ ಬೇಕಿತ್ತು. ಸಂದೀಪ್ ಶರ್ಮಾ ಎಸೆದ ಮೊದಲ ಎರಡು ಎಸೆತ ವೈಡ್ ಆಗಿತ್ತು. ಎರಡು ಮತ್ತು ಮೂರನೇ ಎಸೆತವನ್ನು ಧೋನಿ ಸಿಕ್ಸರ್‌ಗೆ ಅಟ್ಟಿದ ಹಿನ್ನೆಲೆಯಲ್ಲಿ ಕೊನೆಯ ಮೂರು ಎಸೆತಗಳಲ್ಲಿ 7 ರನ್ ಬೇಕಿತ್ತು. ನಂತರದ ಮೂರು ಎಸೆತಗಳಲ್ಲಿ ಸಿಂಗಲ್ ರನ್ ಬಂದ ಹಿನ್ನೆಲೆಯಲ್ಲಿ ಚೆನ್ನೈ ತಂಡ ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು.
ಈ ಹಿಂದೆ ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ಐಪಿಎಲ್ ಲಭ್ಯವಿರಲಿಲ್ಲ. ಆದರೆ ಜಿಯೋ ಸಿನಿಮಾದಲ್ಲಿ ಉಚಿತವಾಗಿ ಐಪಿಎಲ್ ವೀಕ್ಷಣೆ ಮಾಡಲು ಅವಕಾಶವಿರುವುದರಿಂದ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ.
ಏಪ್ರಿಲ್ 17 ರಂದು ಬೆಂಗಳೂರು ಮತ್ತು ಚೆನ್ನೈ ನಡುವಿನ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಎಷ್ಟು ವೀಕ್ಷಣೆಯಾಗಬಹುದು ಎಂಬ ಕುತೂಹಲ ಹೆಚ್ಚಾಗಿದೆ.