ಡೇಟಿಂಗ್ ಆ್ಯಪ್ ಜಾಲಕ್ಕೆ ಸಿಲುಕಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಯುವತಿ!
ಬೆಂಗಳೂರು : ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಅಪರಿಚಿತ ವಂಚಕನ ಬಲೆಗೆ ಬಿದ್ದ ಯುವತಿಯೊಬ್ಬರು 3.18 ಲಕ್ಷ ರೂ. ಕಳೆದುಕೊಂಡಿದ್ದಾರೆ.ಈ ಕುರಿತು ಮೋಸ ಹೋದ 35 ವರ್ಷದ ಯುವತಿ ವೈಟ್‌ಫೀಲ್ಡ್ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದಿತ್ಯ ಹೆಸರಿನ ವಂಚಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ದೂರುದಾರೆಗೆ ಕೆಲ ತಿಂಗಳ ಹಿಂದೆ ಡೇಟಿಂಗ್ ಆ್ಯಪ್‌ನಲ್ಲಿಆದಿತ್ಯ ಎಂಬಾತ ಪರಿಚಯವಾಗಿದ್ದ. ತಾನು ಲಂಡನ್‌ನಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದ. ಬಳಿಕ ಇಂಟರ್ನೆಟ್ ವಾಟ್ಸ್‌ಆ್ಯಪ್ ಕಾಲ್‌ನಲ್ಲಿ ಸಂಪರ್ಕ ಸಾಧಿಸಿದ್ದು, ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು.
ಏಪ್ರಿಲ್ 4 ರಂದು ದೆಹಲಿ ಏರ್‌ಪೋರ್ಟ್‌ಗೆ ಬಂದಿರುವುದಾಗಿ ಆದಿತ್ಯ ಮೆಸೇಜ್ ಮಾಡಿದ್ದ. ಇದಾದ ಕೆಲವೇ ಸಮಯದ ಬಳಿಕ ಏರ್‌ಪೋರ್ಟ್ ಸಿಬ್ಬಂದಿ ಎಂದು ಹೇಳಿಕೊಂಡ ಯುವತಿ ಕರೆ ಮಾಡಿ ಆದಿತ್ಯ ಅವರು ಮನಿ ಲಾಂಡರಿಂಗ್ ಸರ್ಟಿಫಿಕೇಟ್ ಹೊಂದಿಲ್ಲ. ಹೀಗಾಗಿ, ಅವರು ವಿದೇಶದಿಂದ ತಂದಿರುವ ಹಣ ಜಪ್ತಿ ಮಾಡಲಾಗುತ್ತದೆ ಎಂದು ತಿಳಿಸಿದ್ದಳು. ಜತೆಗೆ, ಆದಿತ್ಯರನ್ನು ಹಣದ ಸಮೇತ ಬಿಡಲು ಶುಲ್ಕ ಪಾವತಿಸಬೇಕು ಎಂದು ಹೇಳಿದ್ದಳು. ಇದರಿಂದ ಕಂಗಾಲಾದ ದೂರುದಾರೆ, ಯುವತಿ ಕೊಟ್ಟ ಅಕೌಂಟ್ ನಂಬರ್‌ಗೆ ಹಂತ-ಹಂತವಾಗಿ 3.18 ಲಕ್ಷ ರೂ. ವರ್ಗಾವಣೆ ಮಾಡಿದ್ದರು. ಪುನಃ ಹೆಚ್ಚಿನ ಹಣಕ್ಕೆ ಬೇಡಿಕೆ ಬಂದಾಗ ತಾವು ಮೋಸ ಹೋಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.