ಡೆಲಿವರಿಯಾದ ತಕ್ಷಣ ಹೆಣ್ಣು ಶಿಶುವನ್ನು ಕೊಂದ 15ರ ಬಾಲಕಿ
ಮುಂಬೈ: 15 ವರ್ಷದ ಬಾಲಕಿಯೊಬ್ಬಳು ಯೂಟ್ಯೂಬ್ ವೀಡಿಯೋ (Youtube Video) ಗಳನ್ನು ನೋಡಿದ ಬಳಿಕ ಮನೆಯಲ್ಲಿಯೇ ಹೆಣ್ಣು ಮಗು (Girl Baby) ವಿಗೆ ಜನ್ಮ ನೀಡಿದ್ದಾಳೆ. ನಂತರ ಆಕೆ ನವಜಾತ ಶಿಶುವನ್ನು ಕೊಂದ ಘಟನೆ ಮಹಾರಾಷ್ಟ್ರ (Maharastra) ದ ನಾಗ್ಪುರ (Nagpur) ನಗರದಲ್ಲಿ ನಡೆದಿದೆ.
ಬಾಲಕಿ ಅಂಬಾಜಾರಿ ಪ್ರದೇಶದ ನಿವಾಸಿ. ಈಕೆಗೆ ಸಾಮಾಜಿಕ ಜಾಲತಾಣ (Social Media) ದಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿದ್ದಾನೆ. ಪರಿಚಯ ಸಲುಗೆಗೆ ತಿರುಗಿ ಆತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವ್ಯಕ್ತಿಯ ಕಾಮತೃಷೆಗೆ ಬಾಲಕಿ ಗರ್ಭಿಣಿಯಾಗಿದ್ದಾಳೆ. ಆದರೆ ತಾಯಿ ಬಳಿ ಮಾತ್ರ ತನಗೆ ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳುತ್ತಾ ತಾನು ಗರ್ಭಿಣಿ (Girl Pregnant) ಎಂಬ ವಿಚಾರವನ್ನು ಮುಚ್ಚಿಟ್ಟಳು. ಅಲ್ಲದೆ ಗೌಪ್ಯತೆ ಕಾಪಾಡಿಕೊಳ್ಳಲು ಆಕೆ ಯೂಟ್ಯೂಬ್ ಮೊರೆ ಹೋಗಿದ್ದಾಳೆ. ಮಾರ್ಚ್ 2 ರಂದು ಅವಳು ತನ್ನ ಮನೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು ಹುಟ್ಟಿದ ತಕ್ಷಣವೇ ಆಕೆ ನವಜಾತ ಶಿಶುವನ್ನು ಕತ್ತು ಹಿಸುಕಿ ಸಾಯಿಸಿದಳು. ನಂತರ ಶವವನ್ನು ತನ್ನ ಮನೆಯ ಪೆಟ್ಟಿಗೆಯಲ್ಲಿ ಬಚ್ಚಿಟ್ಟಿದ್ದಾಳೆ.
ಇತ್ತ ಕೆಲಸದ ನಿಮಿತ್ತ ಹೊರಗಡೆ ತೆರಳಿದ್ದ ಮನೆಗೆ ಮರಳಿದ ಬಳಿಕ ಮಗಳ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ನವಜಾತ ಶಿಶುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಘಟನೆ ಸಂಬಂಧ ಭಾರತೀಯ ದಂಡ ಸಂಹಿತೆ (IPC) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಕೊಲೆ ಆರೋಪ ಹೊರಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.