‘ಚೋಳರ ಸಾಮ್ರಾಜ್ಯ ನಾಶ ಮಾಡುತ್ತೇವೆ’; ಗಮನ ಸೆಳೆದ ‘ಪೊನ್ನಿಯಿನ್ ಸೆಲ್ವನ್ 2’ ಟ್ರೇಲರ್
![All about coconut tree 32](https://urtv24.com/wp-content/uploads/2023/03/All-about-coconut-tree-32.jpg)
ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ (Ponniyin Selvan) ಸಿನಿಮಾ ಗಮನ ಸೆಳೆದಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿ ಬೀಗಿದೆ. ಈಗ ಈ ಚಿತ್ರಕ್ಕೆ ಸೀಕ್ವೆಲ್ ಸಿದ್ಧಗೊಂಡಿದೆ. ಭರದಿಂದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಏಪ್ರಿಲ್ 28ರಂದು ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮೊದಲು ಟ್ರೇಲರ್ ರಿಲೀಸ್ ಮಾಡಲಾಗಿದೆ. ಈ ಟ್ರೇಲರ್ ಎಲ್ಲರ ಗಮನ ಸೆಳೆದಿದೆ. ಐಶ್ವರ್ಯಾ ರೈ (Aishwarya Rai), ವಿಕ್ರಮ್, ಕಾರ್ತಿ, ತ್ರಿಶಾ ಎಂದಿನಂತೆ ತಮ್ಮ ನಟನೆ ಮೂಲಕ ಗಮನ ಸೆಳೆದಿದ್ದಾರೆ. ಈ ಚಿತ್ರಕ್ಕಾಗಿ ಪ್ರೇಕ್ಷಕರು ಕಾದಿದ್ದಾರೆ.
ಪೊನ್ನಿಯಿನ್ ಸೆಲ್ವನ್ ಅವರ ಸಾವಿನ ನಂತರ ಹೊಸ ರಾಜನ ಹೆಸರು ಘೋಷಿಸಲಾಗುತ್ತದೆ. ಅಲ್ಲಿಂದ ಕಿತ್ತಾಟ ಶುರುವಾಗುತ್ತದೆ. ಚೋಳರ ಸಾಮ್ರಾಜ್ಯವನ್ನು ನಾವು ನಾಶ ಮಾಡುತ್ತೇವೆ ಎಂದು ನಂದಿನಿ (ಐಶ್ವರ್ಯಾ ರೈ) ಶಪಥ ಮಾಡುತ್ತಾಳೆ. ಟ್ರೇಲರ್ನ ಕೊನೆಯಲ್ಲಿ ಕರಿಕಾಲನ್ (ವಿಕ್ರಮ್) ಎದೆಗೆ ನಂದಿನಿ ಖಡ್ಗ ಚುಚ್ಚುತ್ತಾಳೆ. ಈ ಕುತೂಹಲದೊಂದಿಗೆ ಟ್ರೇಲರ್ ಕೊನೆಗೊಂಡಿದೆ.
‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಅದ್ದೂರಿ ಮೇಕಿಂಗ್ನಿಂದ ಗಮನ ಸೆಳೆದಿತ್ತು. ಚಿತ್ರಕ್ಕಾಗಿ ಹಾಕಿದ ಸೆಟ್ಗಳು ಕಣ್ಮನ ಸೆಳೆದಿದ್ದವು. ಸೀಕ್ವೆಲ್ನಲ್ಲೂ ಈ ಅದ್ದೂರಿತನ ಮುಂದುವರಿಯುವ ಸೂಚನೆ ಸಿಕ್ಕಿದೆ. ಮೊದಲ ಭಾಗ ವಿಶ್ವಾದ್ಯಂತ 480 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.
ಟ್ರೇಲರ್ ಲಾಂಚ್ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆದಿದೆ. ಐಶ್ವರ್ಯಾ ರೈ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಐಶ್ವರ್ಯಾ ರೈ ಅವರು ಅಭಿಮಾನಿಗಳಿಗೆ ಧನ್ಯವಾದ ಹೇಳಿದರು. ‘ನೀವು ನಮಗೆ ತುಂಬಾ ಪ್ರೀತಿ ಮತ್ತು ಮೆಚ್ಚುಗೆಯನ್ನು ನೀಡಿದ್ದೀರಿ. ನಮ್ಮ ಕೆಲಸವನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು. ಪೊನ್ನಿಯಿನ್ ಸೆಲ್ವನ್ ಸೀಕ್ವೆಲ್ಗಾಗಿ ನಾವು ಕಾದಿದ್ದೇವೆ’ ಎಂದು ಐಶ್ವರ್ಯಾ ರೈ ಹೇಳಿದ್ದಾರೆ.
ಚಿತ್ರದ ಅವಧಿ ಬಗ್ಗೆ ಕಾಡಿದೆ ಚಿಂತೆ
ಈಗಾಗಲೇ ಸಿನಿಮಾಗೆ ಪ್ರಮೋಷನ್ ಶುರುವಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ತಮಿಳು ಸೇರಿ ವಿವಿಧ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಮಣಿರತ್ನಂ ಆ್ಯಂಡ್ ಟೀಂ ದೇಶದ ವಿವಿಧ ನಗರಗಳಿಗೆ ತೆರಳಿ ಪ್ರಚಾರ ಮಾಡಲಿದೆ. ಇದಕ್ಕೂ ಮೊದಲು ಸಿನಿಮಾ ಅವಧಿ ಬಗ್ಗೆ ಸುದ್ದಿ ಒಂದು ಹರಿದಾಡಿದೆ. ಚಿತ್ರದ ಅವಧಿ ಸದ್ಯ 4 ಗಂಟೆ ಇದೆಯಂತೆ. ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಕತ್ತರಿ ಹಾಕಲು ಅವಕಾಶ ನಿರ್ದೇಶಕರಿಗೆ ಇದೆ. ಹೀಗಾಗಿ, ಸಿನಿಮಾದ ಅವಧಿ 3 ಗಂಟೆ 53 ನಿಮಿಷ ಆಗಿರಲಿದೆ. ಇದು ಪ್ರೇಕ್ಷಕರ ಚಿಂತೆಗೆ ಕಾರಣ ಆಗಿದೆ.