ಚಿಕ್ಕಮಗಳೂರಲ್ಲಿ ಖಾಕಿಗಳ ಭರ್ಜರಿ ಬೇಟೆ: ಕಂತೆ-ಕಂತೆ ಹಣ ವಶ
ಚಿಕ್ಕಮಗಳೂರು(ಮಾ.25): ಕಾಫಿನಾಡಲ್ಲಿ ಮಾದರಿ ನೀತಿ ಸಂಹಿತೆಯಲ್ಲೇ ಖಾಕಿಗಳ ಭರ್ಜರಿ ಬೇಟೆಯಾಡಿದ್ದು, ನಿನ್ನೆ(ಶುಕ್ರವಾರ) ಬೆಳಿಗ್ಗೆ ಅಕ್ಕಿ ಮೂಟೆ ಸಾಗಿಸುತ್ತಿದ್ದ ಟೆಂಪೋ ಮೇಲೆ ತರೀಕೆರೆ ಚುನಾವಣಾ ಅಧಿಕಾರಿಗಳಿಂದ ದಾಳಿ ಮಾಡಿ ಟೆಂಪೋ ಸಮೇತ 150 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಮಧ್ಯಾಹ್ನ ಕಂತೆ-ಕಂತೆ ಹಣ ವಶಕ್ಕೆ ಪಡೆದಿದುಕೊಳ್ಳುವ ಮೂಲಕ ಖಾಕಿಗಳ ಭರ್ಜರಿ ಬೇಟೆಯಾಡಿದೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮ ಪತ್ತೆ
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 3.50 ಲಕ್ಷ ರೂ. ನಗದು ಹಾಗೂ 150 ಕ್ವಿಂಟಾಲ್ ಅಕ್ಕಿಯನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಶಿವಮೊಗ್ಗದಿಂದ ತರೀಕೆರೆ ಕಡೆಗೆ ತೆರಳುತ್ತಿದ್ದ ಕಾರೊಂದನ್ನು ಚುನಾವಣಾಧಿಕಾರಿಗಳು ತರೀಕೆರೆಯ ಎಂಸಿ ಕ್ಯಾಂಪ್ ಚೆಕ್‌ಪೋಸ್ಟ್‌ನಲ್ಲಿ ತಡೆದು ತಪಾಸನೆ ನಡೆಸಿದ ಸಂದರ್ಭದಲ್ಲಿ ಸೂಕ್ತ ದಾಖಲೆಗಳಿಲ್ಲದ 3.50 ಲಕ್ಷ ರೂ.ನಗದು ಪತ್ತೆಯಾಗಿದೆ.ನಗದು ವಶಪಡಿಸಿಕೊಂಡು ಹಣ ಸಾಗಿಸುತ್ತಿದ್ದ ಮೂವರನ್ನು ವಿಚಾರಣೆಗೊಳಪಡಿಸಲಾಗಿದೆ.
ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 150 ಕ್ವಿಂಟಾಲ್ ಅಕ್ಕಿಯನ್ನು ತರೀಕೆರೆ ತಾಲ್ಲೂಕು ಎಂಸಿ ಕ್ಯಾಂಪ್ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಟೆಂಪೋ ಸಮೇತ ವಶಕ್ಕೆ ಪಡೆದಿದ್ದಾರೆ. ಈ ಅಕ್ಕಿಯನ್ನು ಮತದಾರರಿಗೆ ಹಂಚಲು ತರಲಾಗಿತ್ತು ಎಂದು ತಿಳಿದು ಬಂದಿದ್ದು, ಈ ಸಂಬಂಧ ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.