ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ, ವಿಷಗಾಳಿ ಸೇವಿಸಿ ಇಬ್ಬರು ಪೌರ ಕಾರ್ಮಿಕ ಸಾವು
ದಾವಣಗೆರೆ: ಚರಂಡಿ ಸ್ವಚ್ಛಗೊಳಿಸುವಾಗ ವಿಷಗಾಳಿ ಸೇವಿಸಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ನಡೆದಿದೆ. ಪೌರ ಕಾರ್ಮಿಕರಾದ ದುಂಡಪ್ಪ(45), ನಾಗಪ್ಪ(42) ಮೃತ ರ್ದುದೈವಿಗಳು. ಯುಗಾದಿ ಹಬ್ಬದ ಹಿನ್ನೆಲೆ ಬಸವನಕೋಟೆ ಗ್ರಾಮ ಪಂಚಾಯತಿ ಪಿಡಿಒ ಶಶಿಧರ್ ಪಾಟೀಲ್ ಎಂಬುವವರು ಚರಂಡಿ ಸ್ವಚ್ಛಗೊಳಿಸಲು ಆದೇಶ ನೀಡಿದ್ದರು. ಇದರಿಂದ ಬಹುದಿನಗಳಿಂದ ತುಂಬಿ ತುಳುಕುತ್ತಿದ್ದ ಚರಂಡಿಯ ಸ್ವಚ್ಚತೆಗೆ ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದೆ ಸತ್ಯಪ್ಪ ಮತ್ತು ಮೈಲಪ್ಪ ಮುಂದಾಗಿದ್ದರು.
ಹೀಗೆ ಚರಂಡಿ ಸ್ವಚ್ಚಗೊಳಿಸುವಾಗ ವಿಷ ಗಾಳಿ ಸೇವಿಸಿ ಅಸ್ವಸ್ಥರಾದ ಕಾರ್ಮಿಕರನ್ನ ಹತ್ತಿರದ ಅರಸೀಕೆರೆ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಿ ಬಳಿಕ ಸ್ಥಿತಿ ಗಂಭೀರವಾದ ಹಿನ್ನೆಲೆ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿ ಆಗದೇ ಇಬ್ಬರು ಪೌರಕಾರ್ಮಿಕರು ಸಾವನ್ನಪ್ಪಿದ್ದಾರೆ.
ಇದೀಗ ಕುಟುಂಬಕ್ಕೆ ಆಧಾರವಾಗಿದ್ದವರನ್ನ ಕಳೆದುಕೊಂಡು ಮನೆಯವರು ಆಘಾತಕ್ಕೀಡಾಗಿದ್ದಾರೆ. ಅಧಿಕಾರಿಗಳ ದರ್ಪಕ್ಕೆ ಅಮಾಯಕ ಎರಡು ಜೀವ ಬಲಿಯಾಗಿದೆ. ಬಹಳ ದಿನಗಳಿಂದ ಚರಂಡಿಯಲ್ಲಿ ಸರಾಗವಾಗಿ ನೀರು ಮುಂದೆ ಹರಿದುಹೋಗದ ಕಾರಣ ಅಪಾರ ಪ್ರಮಾಣದ ತ್ಯಾಜ್ಯ ಕಟ್ಟಿಕೊಂಡು ಕೊಳೆತಿದ್ದು, ವಿಷಕಾರಿ ರಾಸಾಯನಿಕ ಉತ್ಪತ್ತಿಯಾಗಿದೆ. ತೆರೆದ ಚರಂಡಿಯಲ್ಲಿ ಇಳಿದಿದ್ದ ಕಾರ್ಮಿಕರು ತಾಸುಗಟ್ಟಲೆ ಬಗ್ಗಿ ತ್ಯಾಜ್ಯ ಹೊರ ತೆಗೆಯುವ ಸಮಯದಲ್ಲಿ ವಿಷ ಗಾಳಿ ಸೇವಿಸಿ ಇಬ್ಬರೂ ಅಸ್ವಸ್ಥರಾಗಿದ್ದಾರೆ.
ಪಂಚಾಯಿತಿ ಪಿಡಿಒ ಹಾಗು ಸಿಬ್ಬಂದಿ ಚರಂಡಿ ಸ್ವಚ್ಛತಾ ಸಮಯದಲ್ಲಿ ಕೂಲಿಕಾರರ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಕೈಗವಸು ಮತ್ತು ಮುಖ ಗವಸು ನೀಡದೆ ಏಕಾಏಕಿ ಚರಂಡಿಗೆ ಇಳಿಸಿದ್ದು, ಪಿಡಿಓ ಶಶಿಧರ್ ಪಾಟೀಲ್ ಅವರ ನಿರ್ಲಕ್ಷ್ಯದ ಕಾರಣ ಇಬ್ಬರ ಸಾವಿಗೆ ಕಾರಣವಾಗಿದೆ. ಅಧಿಕಾರಿಗಳು ತಮ್ಮ ತಪ್ಪನ್ನು ಮರೆಮಾಚುವ ಸಲುವಾಗಿ ಪ್ರಕರಣವನ್ನು ತಿರುಚುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಇನ್ನು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ. ಚರಂಡಿ ಸ್ವಚ್ಛತೆ ಸಮಯದಲ್ಲಿ ಅಸ್ವಸ್ಥರಾಗಿದ್ದ ಸತ್ಯಪ್ಪ ಮತ್ತು ಮೈಲಪ್ಪ ಎಂಬುವವರು ದಾವಣಗೆರೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಈ ಬಗ್ಗೆ ಇನ್ನೂ ದೂರು ದಾಖಲಾಗಿಲ್ಲ. ಗ್ರಾಮ ಪಂಚಾಯಿತಿಗೆ ಸೇರಿದ ಚರಂಡಿ ಕಾರ್ಯದಲ್ಲಿ ಮೃತರು ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.