ಕೇಸರಿಮಯವಾದ ಕುಂದಾನಗರಿ ಬೆಳಗಾವಿ- ಗಲ್ಲಿ ಗಲ್ಲಿಗಳಲ್ಲಿ ಬಿಜೆಪಿ ಬಾವುಟ ಹಾರಾಟ

ಬೆಳಗಾವಿ: ಕುಂದಾನಗರಿ ಬೆಳಗಾವಿಗೆ (Belagavi) ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ಹಿನ್ನೆಲೆಯಲ್ಲಿ ನಗರವು ಕೇಸರಿಮಯವಾಗಿದ್ದು, ಗಲ್ಲಿ ಗಲ್ಲಿಗಳಲ್ಲಿ ಬಿಜೆಪಿ (BJP) ಬಾವುಟ ಹಾರಾಡುತ್ತಿವೆ.
ಶಿವಮೊಗ್ಗ ಭೇಟಿ ಬಳಿಕ ಮಧ್ಯಾಹ್ನ 2:30ಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಮಾಲಿನಿ ಸಿಟಿ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಮೋ ಚಾಲನೆ ನೀಡಲಿದ್ದಾರೆ. ಮಾಲಿನಿ ಸಿಟಿ ಮೈದಾನದಲ್ಲಿ 10 ಎಕರೆ ಜಾಗದಲ್ಲಿ ಬೃಹದಾಕಾರದ ಟೆಂಟ್ ನಿರ್ಮಾಣ ಮಾಡಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಆಸನಗಳ ವ್ಯವಸ್ಥೆಯನ್ನು ಬೆಳಗಾವಿ ಜಿಲ್ಲಾಡಳಿತ ಮಾಡಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತು ಬಿಡುಗಡೆ ಮಾಡಲಿರುವ ಮೋದಿ 8 ಕೋಟಿಗೂ ಹೆಚ್ಚು ರೈತರ ಖಾತೆಗೆ ತಲಾ 2,000 ರೂ. ಜಮಾವಣೆ ಆಗಲಿದೆ.
ಇದೇ ವೇಳೆ ನವೀಕೃತ ಬೆಳಗಾವಿ ರೇಲ್ವೆ ನಿಲ್ದಾಣ ಉದ್ಘಾಟನೆ, ಬೆಳಗಾವಿ, ಕಿತ್ತೂರು, ಧಾರವಾಡ ರೈಲು ಮಾರ್ಗಕ್ಕೆ ಶಂಕು ಸ್ಥಾಪನೆ, ಬೆಳಗಾವಿ ಲೋಂಡಾ ರೈಲು ಮಾರ್ಗ ಡಬ್ಲಿಂಗ್ ಕಾಮಗಾರಿ, ಬಹುಗ್ರಾಮ ಕುಡಿಯುವ ನೀರು ಯೋಜನೆ ಲೋಕಾರ್ಪಣೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ. ಇದಲ್ಲದೇ ಮಾಲಿನಿ ಸಿಟಿ ಮೈದಾನದಲ್ಲಿ ನಡೆಯುವ ಸಮಾವೇಶಕ್ಕೆ ಆಗಮಿಸುವ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಬೆಳಗಾವಿ ಜಿಲ್ಲೆಯ ಪ್ರತಿ ಗ್ರಾಪಂನಿಂದ ಬಸ್ ವ್ಯವಸ್ಥೆ ಮಾಡಲಾಗಿದೆ.
ಫಲಾನುಭವಿಗಳ ಕರೆತರಲು ಒಂದು ಸಾವಿರಕ್ಕೂ ಹೆಚ್ಚು ಸರ್ಕಾರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಮಾಲಿನಿ ಸಿಟಿ ಮೈದಾನದ ಅರ್ಧ ಕಿಮೀ ಅಂತರದಲ್ಲಿ ಮೂರು ಸ್ಥಳ ಗುರುತಿಸಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ವಾಹನಗಳ ಪಾರ್ಕಿಂಗ್‌ಗೆ 3 ಸ್ಥಳಗಳಲ್ಲಿ 50 ಎಕರೆ ಜಾಗ ಮೀಸಲು ಇಡಲಾಗಿದ್ದು, ಪಾರ್ಕಿಂಗ್ ಸ್ಥಳದಲ್ಲಿಯೇ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ಹೆಜ್ಜೆ ಹೆಜ್ಜೆಗೂ ಪೊಲೀಸ್ ಸರ್ಪಗಾವಲು: ಮೋದಿ ಆಗಮನ ಹಿನ್ನೆಲೆ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ನಗರದ ಎಪಿಎಂಸಿ ಬಳಿಯ ಪೊಲೀಸ್ ಮೈದಾನದಿಂದ ಮಾಲಿನಿ ಸಿಟಿ ಮೈದಾನದವರೆಗೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಆಯೋಜನೆ ಹಿನ್ನಲೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಂಡಿದ್ದು, ಮೋದಿ ಭದ್ರತೆಗೆ 5 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದ್ದು, ಮೋದಿ ಇಂದು 10 ಕಿಮೀ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋ ವೇಳೆ ಅಹಿತಕರ ಘಟನೆ ನಡೆಯದಂತೆ ಪೊಲೀಸರ ನಿಗಾ ವಹಿಸಿದ್ದಾರೆ. ಬೆಳಗಾವಿ ಜಿಲ್ಲಾ ಎಸ್ಪಿ ಡಾ.ಸಂಜೀವ್ ಪಾಟೀಲ್ ಸೇರಿ ಹಲವು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಭದ್ರತೆ ನೋಡಿಕೊಳ್ಳಲಾಗುತ್ತಿದೆ.