ಕೇರಳ: EX ಬಾಯ್‌ಫ್ರೆಂಡ್‌ನ ಕಿಡ್ನಾಪ್ ಮಾಡಿ ಹಲ್ಲೆ: 19 ವರ್ಷದ ಯುವತಿಯ ಬಂಧನ
ತಿರುವನಂತರಪುರ: ಮಾಜಿ ಗೆಳೆಯನನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷದ ಯುವತಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. 19 ವರ್ಷದ ಲಕ್ಷ್ಮಿಪ್ರಿಯ ಬಂಧಿತ ಆರೋಪಿ, ಈಕೆ ತನ್ನ ಹೊಸ ಬಾಯ್‌ಫ್ರೆಂಡ್ ಹಾಗೂ ಇತರ ಗೆಳೆಯರ ಜೊತೆ ಸೇರಿ ತನ್ನ ಹಳೆಯ ಬಾಯ್‌ಫ್ರೆಂಡ್‌ನನ್ನು ಆತನ ಮನೆಯಿಂದಲೇ ಕಿಡ್ನಾಪ್ ಮಾಡಿ ನಂತರ ಹೊಡೆದು ಬಡೆದು ದೌರ್ಜನ್ಯವೆಸಗಿದ್ದಾರೆ. ವರ್ಕಲಾದ ಆಯಿರೂರ್‌ನಲ್ಲಿರುವ ಮನೆಯಿಂದ ಆತನನ್ನು ಕಿಡ್ನಾಪ್ ಮಾಡಿದ ಲಕ್ಷ್ಮಿಪ್ರಿಯ ಹಾಗೂ ಆತನ ಗೆಳೆಯರು ಆತನ ಕಣ್ಣಿಗೆ ಬಟ್ಟೆ ಕಟ್ಟಿ ಕಾರಿನಲ್ಲಿ ತುಂಬಿಸಿಕೊಂಡು ಹಳೆಯ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಹೊಡೆದಿದ್ದಾರೆ. ಬಂಧಿತ ಲಕ್ಷ್ಮಿಪ್ರಿಯ ಚೆರುನ್ನಿಯೂರ್ ನಿವಾಸಿಯಾಗಿದ್ದು, ಬಿಸಿಎ ವಿದ್ಯಾರ್ಥಿನಿಯಾಗಿದ್ದಾಳೆ. ಆಕೆಯನ್ನು ತಿರುವನಂತಪುರದಲ್ಲಿರುವ ಆಕೆಯ ಸ್ನೇಹಿತರ ಮನೆಯಿಂದ ಪೊಲೀಸರು ಬಂಧಿಸಿದ್ದಾರೆ.
ಏಪ್ರಿಲ್ 5 ರಂದು ಈ ಕಿಡ್ನಾಪ್ ಹಾಗೂ ಹಲ್ಲೆ ಪ್ರಕರಣ ನಡೆದಿದೆ. ಪೊಲೀಸರ ಪ್ರಕಾರ ಪ್ರಕರಣದಲ್ಲಿ ಲಕ್ಷ್ಮಿಯೇ ಪ್ರಮುಖ ಆರೋಪಿಯಾಗಿದ್ದು, ಈಕೆ ಹಾಗೂ ಈಕೆಯ ಗೆಳೆಯರು ಮೊದಲ ವರ್ಷದಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿಯನ್ನು ಕಿಡ್ನಾಪ್ ಮಾಡಿದ್ದರು. ಘಟನೆಯಲ್ಲಿ ಒಟ್ಟು 10 ಆರೋಪಿಗಳು ಭಾಗಿಯಾಗಿದ್ದು, ಲಕ್ಷ್ಮಿಪ್ರಿಯಾ (Lakshmipriya) ಬಂಧನಕ್ಕೆ ಮೊದಲು 24 ವರ್ಷದ ಎರ್ನಾಕುಲಂ ನಿವಾಸಿ ಅಮಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.
ಲಕ್ಷ್ಮಿ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿ ಇಬ್ಬರು ಸಂಬಂಧದಲ್ಲಿದ್ದರು. ಇತ್ತೀಚೆಗೆ ಆಕೆ ಉನ್ನತ ಶಿಕ್ಷಣಕ್ಕಾಗಿ ಎರ್ನಾಕುಲಂಗೆ ತೆರಳಿದ್ದು, ಅಲ್ಲಿ ಹೊಸ ಹುಡುಗನ ಪರಿಚಯವಾಗಿ ಪ್ರೀತಿ ಶುರುವಾಗಿದೆ. ಹೀಗಾಗಿ ಆಕೆ ಹಳೆಯ ಗೆಳೆಯನನ್ನು ಕೈ ಬಿಡಲು ನಿರ್ಧರಿಸಿದ್ದಾಳೆ. ಆದರೆ ಇದಕ್ಕೆ ಮೊದಲ ಗೆಳೆಯ ಒಪ್ಪಿಲ್ಲ. ಹೀಗಾಗಿ ಆಕೆ ತನ್ನ ಆರು ಜನ ಗೆಳೆಯರೊಂದಿಗೆ ಸೇರಿ ಆತನನನ್ನು ಆರಿಯೂರ್‌ನಲ್ಲಿರುವ ಆತನ ಮನೆಯಿಂದಲೇ ಕಿಡ್ನ್ಯಾಪ್ (Kidnap) ಮಾಡಿಸಿ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತನನ್ನು ಥಳಿಸಿದ್ದಲ್ಲದೇ ಆತನನ್ನು ಬೆತ್ತಲಾಗಿಸಿ ಕಂಬಕ್ಕೆ ಕಟ್ಟಿ ಮತ್ತೆ ಹಲ್ಲೆ ಮಾಡಿದ್ದು, ಅದರ ವಿಡಿಯೋ ಚಿತ್ರೀಕರಿಸಿದ್ದಾರೆ. ನಂತರ ವೈಟಿಲ್ (Vyttilla) ಎಂಬಲ್ಲಿ ಆತನನ್ನು ಎಸೆದು ಹೋಗಿದ್ದಾರೆ.
ಆದರೆ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಲಕ್ಷ್ಮಿಪ್ರಿಯ ತಾಯಿ ನನ್ನ ಮಗಳು ಅಂತವಳಲ್ಲ, ಅವರ ಮಧ್ಯೆ ಯಾವುದೇ ಸಂಬಂಧ ಇರಲಿಲ್ಲ, ಅವರಿಬ್ಬರು ಸ್ನೇಹಿತರಾಗಿದ್ದರೂ ಅಷ್ಟೇ ಇತ್ತೀಚೆಗೆ ಆತ ನನ್ನ ಮಗಳಿಗೆ ಅಶ್ಲೀಲ ವೀಡಿಯೋಗಳನ್ನು ಕಳಿಸಿದ್ದ. ಹೀಗಾಗಿ ಆಕೆಯ ಸ್ನೇಹಿತರು ಅವಳಿಗೆ ಈ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡಿದರು. ನನ್ನ ಮಗಳು ಏನು ಮಾಡಿಲ್ಲ, ಅವಳ ಸ್ನೇಹಿತರೇ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ನಾನು ಸುಳ್ಳು ಹೇಳುವುದು ಎಂದಾದರೆ ಬೇಕಿದ್ದರೆ ಆಕೆಯ ಕಾಲೇಜಿನಲ್ಲಿ ಆಕೆಯ ಶಿಕ್ಷಕರನ್ನು ಕೇಳಿ ನೋಡಿ, ಆಕೆ ಅಧ್ಯಯನದಲ್ಲೂ ಮುಂದಿದ್ದಾಳೆ ಎಂದು ಲಕ್ಷ್ಮಿಪ್ರಿಯ ತಾಯಿ ಹೇಳಿದ್ದಾರೆ.
ಇತ್ತ ಹಲ್ಲೆಗೊಳಗಾದ ಯುವಕನ ತಂದೆ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಅವರಿಬ್ಬರು ಸ್ನೇಹಿತರಾಗಿದ್ದು, ಅವರಿಬ್ಬರ ಮಧ್ಯೆ ಯಾವುದೇ ಸಂಬಂಧ ಇರಲಿಲ್ಲ. ಲಕ್ಷ್ಮಿಪ್ರಿಯ ನನ್ನ ಮಗನನ್ನು ಕಿಡ್ನಾಪ್ ಮಾಡಿದ್ದು, ನಂತರ ಆತನ ಬಿಡುಗಡೆಗೆ ಹಣದ ಬೇಡಿಕೆ ಇರಿಸಿದ್ದಳು. ಆಕೆ ಹಾಗೂ ಆತನ ಸ್ನೇಹಿತರು ಸೇರಿ ನನ್ನ ಮಗನ ಮೇಲೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆತನನ್ನು ಕಾರಿನಲ್ಲಿ ಹಾಕಿ ಹಲ್ಲೆ ಮಾಡಿದ್ದಲ್ಲದೇ ಆತನ ಬಳಿ ಇದ್ದ ಚಿನ್ನದ ಸರ, ಮೊಬೈಲ್ ವಾಚ್, ಪರ್ಸ್, ಹಣವನ್ನು ಕಸಿದುಕೊಂಡಿದ್ದಾರೆ. ನಂತರ ಹಳೆ ಮನೆಯೊಂದಕ್ಕೆ ಆತನನ್ನು ಕರೆದೊಯ್ದು, ಅಲ್ಲಿ ಮತ್ತೆ ಹಲ್ಲೆ ನಡೆಸಿದ್ದಲ್ಲದೇ ಆತನಿಗೆ ಕರೆಂಟ್ ಶಾಕ್ ನೀಡಿದ್ದಾರೆ. ಇವರ ದೌರ್ಜನ್ಯದಿಂದ ನನ್ನ ಮಗ ಶಾಕ್‌ಗೊಳಗಾಗಿದ್ದು ಇನ್ನು ಚೇತರಿಸಿಕೊಂಡಿಲ್ಲ ಎಂದು ಯುವಕನ ತಂದೆ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಟ್ಟು 8 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದರಲ್ಲಿ ಪ್ರಮುಖ ಆರೋಪಿ ಲಕ್ಷ್ಮಿಪ್ರಿಯ ಹಾಗೂ ಮತ್ತೊರ್ವನನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ಮುಂದುವರೆದಿದೆ.