‘ಕಾಂತಾರ’ ಕಥೆಗಾಗಿ ಮೆಗಾ ಪ್ಲ್ಯಾನ್ ಹೆಣೆದಿದ್ದಾರಂತೆ ರಿಷಬ್ ಶೆಟ್ಟಿ
ಕಾಂತಾರ (Kantara) ಮೈದಾನ ಸದ್ಯಕ್ಕೆ ಸೈಲೆಂಟಾಗಿದೆ. ಆದರೆ ಇನ್ನೇನು ಕೆಲವೇ ವಾರಗಳಲ್ಲಿ ಹವಾ ಎಬ್ಬಿಸಲಿದೆ. ಅದುವರೆಗೆ ಒಳಗೊಳಗೆ ಹೊಸದೊಂದು ಮೆಗಾಪ್ಲಾನ್ ತಯಾರಾಗುತ್ತಿದೆ. ಅದು ಕನ್ನಡ ಚಿತ್ರರಂಗಕ್ಕೆ ಹೊಸದು. ಇದಕ್ಕೆಲ್ಲ ಮೂಲ ಕಾರಣ ಒನ್ಸ್ ಅಗೇನ್ ರಿಷಬ್ ಶೆಟ್ಟಿ (Rishabh Shetty). ಕಾಂತಾರ ಎರಡನೇ ಭಾಗವನ್ನು ಆರಂಭಿಸುವ ಮುನ್ನ ಅವರು ಹೊಸ ಹೊಸ ಯೋಜನೆ ಹಾಕಿಕೊಂಡಿದ್ದಾರೆ. ಅದನ್ನು ಕಾರ್ಯರೂಪಕ್ಕೆ ತರಲು ಸಜ್ಜಾಗಿದ್ದಾರೆ.
ಎಲ್ಲರ ಕಣ್ಣು ಈಗ ರಿಷಬ್ ಶೆಟ್ಟಿ ಅಂಡ್ ಗ್ಯಾಂಗ್‌ನತ್ತ ನೆಟ್ಟಿವೆ. ಕಾಂತಾರದ ಮಹಾ ಗೆಲುವು ಇಡೀ ತಂಡವನ್ನು ಎಲ್ಲಿಗೋ ಹೋಗಿ ಮುಟ್ಟಿಸಿದೆ. ಆ ಸಂಭ್ರಮವನ್ನು ಅನುಭವಿಸಬೇಕು. ಜೊತೆಗೆ ಅದನ್ನು ಕಾಪಾಡಿಕೊಂಡು ಹೋಗಬೇಕು. ಅದಕ್ಕಾಗಿ ಮುಂದಿನ ದಿನಗಳಲ್ಲಿ ಕಾಂತಾರಕ್ಕಿಂತ ಅದ್ಭುತವನ್ನು ಸೃಷ್ಟಿ ಮಾಡಬೇಕು. ಅದಕ್ಕಾಗಿ ಸಕಲ ಸಿದ್ಧತೆ ನಡೆಸುತ್ತಿದೆ ಕಾಂತಾರ ತಂಡ. ಮೊಟ್ಟ ಮೊದಲಿಗೆ ಅದ್ಭುತ ಕತೆಯನ್ನು (Story) ಹುಡುಕಬೇಕು. ಅದಕ್ಕಾಗಿ ದೃಶ್ಯಗಳನ್ನು ಹೊಸೆಯಬೇಕು. ಹಾಗೆಯೇ ಪ್ರತಿ ದೃಶ್ಯಕ್ಕೆ ದೇವರಂಥ ಸಂಭಾಷಣೆ ಹೊಸೆಯಬೇಕು. ಇಲ್ಲೇ ರಿಷಬ್ ಹೊಸ ಥಿಯರಿ ಅಳವಡಿಕೊಳ್ಳಲಿದ್ದಾರಂತೆ.
ಏನಿದು ಡಿವೈನ್ ಸ್ಟಾರ್ ಪ್ಲಾನು? ವಿಷಯ ಇಷ್ಟೇ. ಕಾಂತಾರ ಸಿನಿಮಾಕ್ಕಾಗಿ ಮೂರು ಮೂರು ರೈಟರ್ಸ್ ಕೆಲಸ ಮಾಡುತ್ತಿದ್ದಾರೆ. ಶೆಟ್ಟರ ಜೊತೆ ಇನ್ನು ಮೂವರು ಕುಳಿತು ಚರ್ಚೆ ಮಾಡಿದ್ದಾರೆ. ಅಫ್‌ಕೋರ್ಸ್ ಎಲ್ಲವೂ ಶೆಟ್ಟರ ಬತ್ತಳಿಕೆಯಿಂದ ಬಂದ ಅಸ್ತ್ರಗಳೆ. ಆದರೂ ಫೈನಲ್ ಡ್ರಾಫ್ಟ್ ಮಾಡುವಾಗ ಸಹಜವಾಗಿ ಅಂತಿಮ ಸಲಹೆ ಕೊಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಫೈನಲ್ ವರ್ಶನ್ ಸ್ಕ್ರಿಪ್ಟ್ ಸಿದ್ಧವಾಗಿದೆ. ಈಗ ಕಾಂತಾರದ ಮೇಲಿನ ನಿರೀಕ್ಷೆ ವಿಶ್ವದ ತುಂಬಾ ಹಬ್ಬಿದೆ.
ಸಿನಿಮಾದ ಸ್ಕ್ರಿಪ್ಟ್ ಅನ್ನು ಅದ್ಭುತವಾಗಿಸಲು ಒಟ್ಟು ಹದಿನಾರು ಮಂದಿಯ ಬರಹಗಾರರ ತಂಡ ಕಾಂತಾರಕ್ಕಾಗಿ ಒಂದುಗೂಡಿದ್ದಾರೆ ಅನ್ನೋದು ಮಾಹಿತಿ. ಈ ಹಿಂದೆ ಶೆಟ್ಟರ ತಂಡದಲ್ಲಿದ್ದ ಖಾಯಂ ಬರಹಗಾರರು ಇಲ್ಲೂ ಮುಂದುವರೆದಿದ್ದಾರೆ. ಅವರ ಜೊತೆ ಇನ್ನು ಕೆಲವು ಅಕ್ಷರ ಬಲ್ಲವರನ್ನು ಕರೆದುಕೊಂಡು ಬಂದಿದ್ದಾರಂತೆ. ಒಂದೊಂದು ದೃಶ್ಯವನ್ನು ಎಲ್ಲರೂ ಬರೆಯಬೇಕು. ಅದರಲ್ಲಿ ಗ್ರೇಟ್ ಅನ್ನಿಸಿಕೊಳ್ಳುವ ದೃಶ್ಯಕ್ಕೆ ಗ್ರೀನ್ ಸಿಗ್ನಲ್ ಸಿಗಲಿದೆ. ಟಾಲಿವುಡ್‌ನಲ್ಲಿ ಈ ರೀತಿ ಪರಚೂರಿ ಬ್ರದರ್ಸ್ ಮಾಡುತ್ತಿದ್ದರು. ಹಲವು ಹುಡುಗರಿಂದ ಡೈಲಾಗ್ ಬರೆಸುತ್ತಿದ್ದರು. ಅದರಲ್ಲಿ ಬೆಸ್ಟ್ ಡೈಲಾಗ್ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅದನ್ನೇ ರಿಷಬ್ ಮಾಡಲಿದ್ದಾರಾ ಅಥವಾ ಇದೆಲ್ಲ ಗಾಳಿಸುದ್ದಿಯಾ ? ಶೆಟ್ಟರಿಗೆ ಸಂದೇಶ ಮಾಡಿದ್ದೇವೆ. ಉತ್ತರ ಇನ್ನೂ ಬಂದಿಲ್ಲ.
ಇನ್ನು ಕೆಲವು ದಿನಗಳಲ್ಲಿ ಶೆಟ್ಟರ ಮೊಬೈಲ್ ಸ್ವಿಚ್ ಆಫ್ ಆಗಲಿದೆ. ಅಲ್ಲಿಂದ ಅವರ ಕಾಡಿನಲ್ಲಿ ಕತೆ ಬೇಟೆ ಶುರುವಾಗಲಿದೆ. ಅದು ಮುಗಿದ ಮೇಲೆ ಚಿತ್ರಕತೆ, ಸಂಭಾಷಣೆ ಇತ್ಯಾದಿ. ಎಲ್ಲವೂ ಕೆಲವು ತಿಂಗಳಲ್ಲಿ ಅಂತಿಮ ರೂಪು ಪಡೆಯಲಿದೆ. ಅದಾದ ಮೇಲೆ ಶೂಟಿಂಗ್‌ಗೆ ಹೊರಡಲು ಸಜ್ಜಾಗಲಿದ್ದಾರೆ. ಈ ಬಾರಿ ಮೊದಲ ಭಾಗಕ್ಕಿಂತ ದೊಡ್ಡ ಮಟ್ಟದಲ್ಲಿ, ದೊಡ್ಡ ಕ್ವಾನ್ವಾಸ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಅದಕ್ಕಾಗಿ ಕಥಾ ಕಲ್ಪನೆ ಕೂಡ ವಿಶಾಲವಾಗಿರಲಿದೆ. ನಿರ್ಮಾಪಕ ವಿಜಯ್ ಕಿರಗಂದೂರ್ ಈ ಬಾರಿ ಹಿಂದೆ ಮುಂದೆ ಯೋಚಿಸದೆ ಕಾಸು ಸುರಿಯಲಿದ್ದಾರೆ. ಎಷ್ಟು ಕೋಟಿ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್ ಆಫ್ ಕಾಂತಾರ.
ಒಂದು ಸಿನಿಮಾ ಅನಿರೀಕ್ಷಿತವಾಗಿ ಗೆದ್ದು ಬಿಟ್ಟರೆ, ಎಲ್ಲರ ಕಲ್ಪನೆ ಮೀರಿ ಕಾಸು ಮಾಡಿದರೆ, ಒಂದು ಚಿತ್ರರಂಗದ ದಿಕ್ಕನ್ನೇ ಹೊಸ ದಾದಿಯತ್ತ ಕರೆದುಕೊಂಡು ಹೋದರೆ ಏನಾಗುತ್ತದೋ ಈಗ ಕಾಂತಾರಕ್ಕೂ ಅದೇ ಆಗಿದೆ. ಕನಸು ಮನಸಲ್ಲೂ ಇಂಥ ದೀಪಾವಳಿ ಮಾಡುತ್ತೇವೆ ಎಂದು ಯಾರೂ ಊಹಿಸಿರಲಿಲ್ಲ. ಅದೀಗ ನಡೆದುಹೋಗಿದೆ. ಈಗ ಎಲ್ಲ ಜವಾಬ್ದಾರಿ ರಿಷಬ್‌ಶೆಟ್ಟಿ ಹಾಗೂ ತಂಡದ ಮೇಲೆ ಬಿದ್ದಿದೆ.