ಐವನ್ ಡಿಸೋಜ ಮನೆ ಮೇಲೆ ದಾಳಿ ಖಂಡಿಸಿ ಬೆಳ್ತಂಗಡಿಯಲ್ಲಿ ಪ್ರತಿಭಟನೆ
ಬೆಳ್ತಂಗಡಿ: ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಇಂದು ಪ್ರತಿಭಟನೆ ಜರುಗಿತು.
ವಿಧಾನ ಪರಿಷತ್ತ್ ಶಾಸಕರಾದ ಐವನ್ ಡಿಸೋಜಾ ರವರ ಮನೆ ಮೇಲೆ ನಡೆದ ದಾಳಿಯನ್ನು ಖಂಡಿಸಿ ಕಲ್ಲು ತೋರಾಟ ನಡೆಸಿ ಶಾಂತಿ ಸೌಹಾರ್ದಕ್ಕೆ ಧಕ್ಕೆ ತಂದ ಅಪರಾಧಿಯನ್ನು ಶೀಘ್ರದಲ್ಲಿ ಬಂಧಿಸಬೇಕು ಹಾಗೂ ಅಪರಾಧಿಗೆ ಬೆಂಬಲ ನೀಡಿದ ಕಾಣದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಇನ್ನು ಮುಂದಕ್ಕೆ ಇಂಥ ಅಪರಾಧಗಳು ನಡೆಯದಂತೆ ಎಚ್ಚರ ವಹಿಸಬೇಕೆಂದು ಬೆಳ್ತಂಗಡಿ ತಹಶೀಲ್ದಾರ್ ಮುಖಾಂತರ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದರು.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಕಥೋಲಿಕ್ ಸಭಾ ಬೆಳ್ತಂಗಡಿ ಪ್ರಾಂತ್ಯದ ಕಾರ್ಯದರ್ಶಿಗಳಾದ ಲಿಯೋ ರಾಡ್ರಿಗಸ್ ಅವರು ಕ್ರೈಸ್ತ ಸಮುದಾಯದ ಮುಖಂಡರಾದ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ರವರ ಮನೆ ಮೇಲೆ ನಡೆದ ದಾಳಿ ನಮಗೆ ಅತ್ಯಂತ ನೋವು ಉಂಟು ಮಾಡಿದೆ ಎಂದರು. ಕ್ರೈಸ್ತ ಸಮುದಾಯವು ಶಿಕ್ಷಣ, ಆರೋಗ್ಯ ಹಾಗೂ ಇತರ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ನೀಡಿದೆ ಇಂಥದರಲ್ಲಿ ನಮ್ಮ ಸಮುದಾಯದ ನಾಯಕನ ಮನೆ ಮೇಲೆ ನಡೆದ ದಾಳಿಯು ಸಮುದಾಯದ ಎಲ್ಲರಿಗೂ ನೋವನ್ನುಂಟು ಮಾಡಿದೆ ಹಾಗೂ ಇಂಥ ಕೃತ್ಯಗಳನ್ನು ನಾವು ಖಂಡಿಸುತ್ತೇವೆ ಎಂದರು.
ಈ ಸಮಾಜದಲ್ಲಿ ಶಾಂತಿಯುತವಾಗಿ ಪ್ರೀತಿಯಿಂದ ಬಾಳುವ ಅವಕಾಶ ನಮಗೆಲ್ಲರಿಗೆ ಉಂಟು ಇಂತಹ ಕೃತ್ಯಗಳು ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಕೆಡಿಸುತ್ತದೆ ಎಂದರು.
ಈ ಪ್ರತಿಭಟನೆ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಅಲ್ಪ ಸಂಖ್ಯಾತ ಘಟಕದ ಪದಾಧಿಕಾರಿಗಳು ಹಾಗೂ ಇತರರು ಭಾಗವಹಿಸಿದರು.