ಐವನ್ ಡಿಸೋಜಾ ಮನೆ ಮೇಲೆ ಕಲ್ಲುತೂರಾಟ: ಬಂಟ್ವಾಳ ಮೂಲದ ಇಬ್ಬರ ಬಂಧನ
ಮಂಗಳೂರು, ಆಗಸ್ಟ್ 28: ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಎಂಎಲ್ಸಿ ಐವನ್ ಡಿಸೋಜಾ (Ivan D’Souza) ಮನೆ ಮೇಲೆ ಕಲ್ಲುತೂರಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಭರತ್ ಅಲಿಯಾಸ್ ಯಕ್ಷಿತ್, ದಿನೇಶ್ ಕುರ್ತಮೊಗೆರು ಬಂಧಿತರು. ಸಿಸಿಕ್ಯಾಮರಾ ದೃಶ್ಯ ಆಧರಿಸಿ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. ಐವನ್ ಡಿಸೋಜಾ ಹೇಳಿಕೆಯಿಂದ ಸಿಟ್ಟಾಗಿ ಕಲ್ಲೆಸೆದಿದ್ದಾಗಿ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿ ಭರತ್, ಬಂಟ್ವಾಳ ತಾಲೂಕಿನ ಬೋಳಂತೂರಿನ ರಾಘವ ಭಂಡಾರಿ ಪುತ್ರ. ಭರತ್ ವಿರುದ್ಧ ಹಲ್ಲೆ ಆರೋಪದಡಿ ಈವರೆಗೆ 3 ಪ್ರಕರಣ ದಾಖಲಾಗಿವೆ. ಕನ್ಯಾನದಲ್ಲಿ ಫೈನಾನ್ಸ್ ವಸೂಲಿ ವಿಭಾಗದಲ್ಲಿ ದಿನೇಶ್ ಕೆಲಸ ಮಾಡುತ್ತಿದ್ದ. ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಆನಂದ ಪೂಜಾರಿ ಪುತ್ರ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ರಾಜ್ಯಪಾಲರ ಥಾಮರ್ ಚಂದ್ ಗೆಹಲೋತ್ ವಿರುದ್ಧ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಹೀಗಾಗಿ ಆ.22 ರಂದು ರಾತ್ರಿ ಸುಮಾರು 11 ಗಂಟೆಗೆ ಹೆಲ್ಮೆಟ್ ಹಾಕಿಕೊಂಡು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಮನೆಯ ಮೇಲೆ ರಾತ್ರಿ ಕಲ್ಲು ತೂರಾಟ ಮಾಡಿ ಪರಾರಿಯಾಗಿದ್ದರು.
ಇದಾದ ನಂತರ 2 ನಿಮಿಷ ಬಿಟ್ಟು ಮತ್ತೆ ಬೈಕ್‌ನಲ್ಲಿ ಬಂದು ಕಲ್ಲು ತೂರಾಟ ಮಾಡಿದ್ದರು. ಇದರಿಂದ ಐವನ್ ಡಿಸೋಜಾ ಅವರ ಮನೆಯ ಕಿಟಕಿ ಗಾಜುಗಳು ಪುಡಿಯಾಗಿದ್ದವು. ಕಲ್ಲು ತೂರಾಟ ವೇಳೆ ಐವನ್ ಡಿಸೋಜಾ ಅವರ ಪತ್ನಿ ಕವಿತಾ ಡಿಸೋಜಾ ಮನೆಯಲ್ಲಿ ಇದ್ದರು. ಸ್ಥಳಕ್ಕೆ ಪಾಂಡೇಶ್ವರ ಠಾಣಾ ಪೊಲೀಸರು ಭೇಟಿ ನೀಡಿ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದ್ದರು.
ರಾಜಕೀಯ ಮುಖಂಡ, ಪತ್ರಕರ್ತ ಅಕ್ಬರ್ ಉಳ್ಳಾಲ ನಿಧನ:
ಉಳ್ಳಾಲ : ಮೇಲಂಗಡಿ ನಿವಾಸಿ ಅಕ್ಬರ್ ಉಳ್ಳಾಲ(65) ಅಲ್ಪಕಾಲದ ಅನಾರೋಗ್ಯ ದಿಂದ ಕಾಸರಗೋಡಿನಲ್ಲಿರುವ ಸ್ವಗೃಹದಲ್ಲಿ ಬುಧವಾರ ನಿಧನರಾದರು.
ಎಚ್ ಎ. ಖಾದರ್(ಬಾರ್ಲಿ ಅಬ್ದುಲ್ಲಾ)ಅವರ ಐವರು ಗಂಡು ಮಕ್ಕಳಲ್ಲಿ ಹಿರಿಯ ಪುತ್ರರಾಗಿ ಮೇಲಂಗಡಿಯಲ್ಲಿ ಜನಿಸಿದ ಅವರು 17 ನೇ ವಯಸ್ಸಿನಲ್ಲಿ ಜನತಾಪಕ್ಷ ಸೇರಿ ರಾಜಕೀಯ ರಂಗದಲ್ಲಿ ತೊಡಗಿಸಿಕೊಂಡಿದ್ದರು. ಕೆಲವು ಸಮಯ ಈ ಪಕ್ಷದಲ್ಲಿ ದುಡಿದು ಉಳ್ಳಾಲದಲ್ಲಿ ಈ ಪಕ್ಷ ಉಳಿಸಲು ಶ್ರಮಿಸಿದ್ದರು.
1982ರಲ್ಲಿ ಮುಸ್ಲಿಂ ಲೀಗ್ ಪಕ್ಷ ಸೇರಿಕೊಂಡಿದ್ದ ಅವರು ಇದರ ಬಳಿಕ ಜನತಾದಳ ಸೇರಿ ಜನತಾದಳ ಸೇವಾದಳದಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದ ಅವರು ರಾಜಕೀಯ ಮುಖಂಡ ಪಿಜಿಆರ್ ಸಿಂಧ್ಯಾ ಅವರ ಒನನಾಡಿಯಾಗಿದ್ದರು.
20 ವರ್ಷಗಳ ಹಿಂದೆ ಬ್ಯಾರಿ ಎಂಬ ಕನ್ನಡ ಪಾಕ್ಷಿಕ ಪತ್ರಿಕೆ ಆರಂಭಿಸಿ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಅವರು ಬಳಿಕ ಅದನ್ನು ವಾರಪತ್ರಿಕೆ ಯಾಗಿ ಮುನ್ನೆಡೆಸಿದ್ಜರು. ಇದರ ಬಳಿಕ ವಾರ್ತಾ ಮಿತ್ರ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು.
ಯಂಗ್ ಮೆನ್ಸ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ರಾಗಿ, ಉಳ್ಳಾಲ ದರ್ಗಾದ ಸದಸ್ಯ ರಾಗಿ, ಮೇಲಂಗಡಿಯ ಹೊಸಪಳ್ಳಿಯ ಕಾರ್ಯದರ್ಶಿ ಯಾಗಿ ಧಾರ್ಮಿಕ ರಂಗದಲ್ಲಿ ಸೇವೆ ಸಲ್ಲಿಸಿದ್ದ ಅವರು, ವಿವಿಧ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಹಳೆ ಕೋಟೆ ಯಲ್ಲಿ ವಾಸವಾಗಿದ್ದ ಅವರು ವರ್ಷದ ಹಿಂದೆ ಕಾಸರಗೋಡಿನಲ್ಲಿ ಹೊಸ ಮನೆ ನಿರ್ಮಿಸಿ ಅಲ್ಲೇ ವಾಸವಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರಿ, ನಾಲ್ವರು ಸಹೋದರರು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಉಡುಪಿ: ಲಾಂಗ್ ಜಂಪ್ ಮಾಡಿದ ಪ್ರೇತಾತ್ಮಗಳು..!
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿಯಲ್ಲಿ ವಿವಿಧ ವೇಷ ಭೂಷಣಗಳ ತೊಟ್ಟು ವಿನೋದಾವಳಿ ಪ್ರದರ್ಶಿಸುತ್ತಿದ್ದಾರೆ. ಈ ವೇಷಧಾರಿಗಳು ಹಲವು ದಿನಗಳಿಂದ ಸಾರ್ವಜನಿಕರಿಗೆ ಸಂಚರಿಸಲು ಸಮಸ್ಯೆಯಾಗಿರುವ ರಸ್ತೆಗಳ ಗುಂಡಿಗಳ ಬಗ್ಗೆ ವೇಷಾಧಾರಿಗಳು ಗಮನ ಸೆಳೆದಿದ್ದಾರೆ. ಹೆದ್ದಾರಿಯ ಗುಂಡಿ ದುರಸ್ತಿಗಾಗಿ ಆಗ್ರಹಿಸಿ ವಿಶಿಷ್ಟವಾಗಿ ಪ್ರತಿಭಟಿಸಿ ಜನರ ಗಮನ ಸೆಳೆದಿದ್ದಾರೆ.
ಈ ರಸ್ತೆಯಲ್ಲಿ ಸಂಚರಿಸಿದರೆ ಅಪಾಯ ಖಚಿತ.. ಯಮಧರ್ಮನೂ ಅಳತೆ ಮಾಡುವಷ್ಟು ಗುಂಡಿಗಳು ಬಿದ್ದಿವೆ. ಇದು ಆದಿ ಉಡುಪಿ-ಮಲ್ಪೆ ಸಂಪರ್ಕಿಸುವ ರಸ್ತೆಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಸಂದರ್ಭದಲ್ಲಿ ವೇಷಧಾರಿಗಳು ಯಮಧರ್ಮ, ಚಿತ್ರಗುಪ್ತ ಹಾಗೂ ಪ್ರೇತಾತ್ಮದ ವೇಷತೊಟ್ಟು ರಸ್ತೆಯಲ್ಲಿ ಲಾಂಗ್‌ಜಂಪ್ ಮಾಡುವ ಮೂಲಕ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸಾರುವ ಅಣಕು ಪ್ರದರ್ಶಿಸಿ ವಿಶಿಷ್ಟವಾಗಿ ಪ್ರತಿಭಟಿಸಿದ ದೃಶ್ಯ ಜನರ ಗಮನಸೆಳೆಯಿತು. ಇದಕ್ಕೆ ಸಾರ್ವಜನಿಕರು ಕೂಡ ಬೆಂಬಲ ಸೂಚಿಸಿದ್ದಾರೆ.
ಮಣಿಪಾಲ: ನೀರಲ್ಲಿ ಮುಳುಗಿದ್ದ ವಿದ್ಯಾರ್ಥಿ ಮೃತ್ಯು
ಮಣಿಪಾಲ: ನೀರಿಲ್ಲಿ ಮುಳುಗಿ ಚಿಂತಾಜನಕ ಸ್ಥಿತಿಯಲ್ಲಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಇಂದು ನಸುಕಿನ ವೇಳೆ ಕೊನೆಯುಸಿರೆಳೆದಿದ್ದಾನೆ.
ಅಲೆವೂರಿನ ನೈಲಪಾದೆಯಲ್ಲಿ ನದಿಯಲ್ಲಿ ಈಜಾಡಲು ಹೋಗಿದ್ದಾಗ ದುರಂತ ಸಂಭವಿಸಿತ್ತು. ಮೃ*ತ ವಿದ್ಯಾರ್ಥಿ ತ್ರಿವೆಂಡಮ್‌ನ ಆರೊನ್ ರೋಜರ್ ಲೀನ್(17) ಎಂಬಾತನಾಗಿದ್ದು, ಭಾನುವಾರ(ಆ 25) ಈಜಾಡಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಡೆಯಾಗಿದ್ದ. ಆರೊನ್ ಪೋಷಕರು ವಿದೇಶದಿಂದ ಆಗಮಿಸಿದ್ದಾರೆ.
ಈಜಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಇನ್ನೋರ್ವ ಕೋಲ್ಕತ್ತಾದ ಮಾಧವ್(18) ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ.
ಘಟನೆ ನಡೆದ ವೇಳೆ ಇಬ್ಬರು ವಿದ್ಯಾರ್ಥಿಗಳು ಪಾರಾಗಿದ್ದರು. ನೀರಿನಲ್ಲಿ ಮುಳುಗಡೆಯಾಗಿದ್ದವರನ್ನು ಸ್ಥಳೀಯರು ತುರ್ತು ಕಾರ್ಯಾಚರಣೆ ನಡೆಸಿ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದರು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.