Jay Shah: ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆ
ದುಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ಜಯ್ ಶಾ (Jay Shah) ಅವರು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಗ್ರೆಗ್ ಬಾರ್ಕ್ಲೇ ಸ್ಥಾನವನ್ನು ವಹಿಸಲಿದ್ದಾರೆ.
ಪ್ರಸ್ತುತ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿಯು ನವೆಂಬರ್ 30ರಂದು ಕೊನೆಗೊಳ್ಳಲಿದೆ. ಸತತ ಎರಡನೇ ಬಾರಿಗೆ ಹುದ್ದೆ ಅಲಂಕರಿಸಿದ್ದ ಅವರು ಇತ್ತೀಚೆಗೆ ಮೂರನೇ ಅವಧಿಗೆ ಸ್ಪರ್ಧೆಯಿಂದ ದೂರ ಸರಿದಿದ್ದರು.
ICC ಅಧ್ಯಕ್ಷರು ತಲಾ ಎರಡು ವರ್ಷಗಳ ಮೂರು ಅವಧಿಗೆ ಅರ್ಹರಾಗಿರುತ್ತಾರೆ. ಆದರೆ ನ್ಯೂಜಿಲೆಂಡ್ ವಕೀಲ ಗ್ರೆಗ್ ಬಾರ್ಕ್ಲೇ ಇದುವರೆಗೆ 4 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಬಾರ್ಕ್ಲೇ ಅವರನ್ನು 2020ರ ನವೆಂಬರ್ ನಲ್ಲಿ ICC ಯ ಸ್ವತಂತ್ರ ಅಧ್ಯಕ್ಷರಾಗಿ ನೇಮಿಸಲಾಯಿತು. ನಂತರ 2022ರಲ್ಲಿ ಈ ಹುದ್ದೆಗೆ ಮರು ಆಯ್ಕೆಯಾಗಿದ್ದರು.
ICC ನಿಯಮಗಳ ಪ್ರಕಾರ, ಅಧ್ಯಕ್ಷರ ಚುನಾವಣೆಯಲ್ಲಿ 16 ಮತಗಳಿದ್ದು, ಈಗ ವಿಜೇತರಿಗೆ 9 ಮತಗಳ (51%) ಸರಳ ಬಹುಮತದ ಅಗತ್ಯವಿದೆ. ಈ ಹಿಂದೆ, ಅಧ್ಯಕ್ಷರಾಗಲು, ಹಾಲಿ ಇರುವವರು ಮೂರನೇ ಎರಡರಷ್ಟು ಬಹುಮತವನ್ನು ಹೊಂದಿರಬೇಕಾಗಿತ್ತು.
ಪ್ರಸಕ್ತ ನಿರ್ದೇಶಕರು 2024ರ ಆಗಸ್ಟ್ 27ರೊಳಗೆ ಮುಂದಿನ ಅಧ್ಯಕ್ಷಗಾದಿಗೆ ನಾಮನಿರ್ದೇಶನ ಸಲ್ಲಿಸಬೇಕಿತ್ತು ಆದರೆ ಅವರು ಸಲ್ಲಿಸಿಲ್ಲ. ಇನ್ನು ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ, ಚುನಾವಣೆ ನಡೆಯಲಿತ್ತು. ಆದರೆ ಜಯ್ ಶಾ (Jay Shah) ಒಬ್ಬರೇ ನಾಮನಿರ್ದೇಶನವಾಗಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನೂತನ ಅಧ್ಯಕ್ಷರ ಅಧಿಕಾರಾವಧಿಯು 2024ರ ಡಿಸೆಂಬರ್ 1ರಿಂದ ಪ್ರಾರಂಭವಾಗುತ್ತದೆ.
ಜಯ್ ಶಾ ಅವರನ್ನು ಐಸಿಸಿ ಮಂಡಳಿಯಲ್ಲಿ ಅತ್ಯಂತ ಪ್ರಭಾವಶಾಲಿ ಮುಖವೆಂದು ಪರಿಗಣಿಸಲಾಗಿದೆ. ಅವರು ಪ್ರಸ್ತುತ ICCಯ ಪ್ರಬಲ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಉಪಸಮಿತಿಯ ಮುಖ್ಯಸ್ಥರಾಗಿದ್ದಾರೆ. ಅವರು 16 ಮತದಾರರಲ್ಲಿ ಹೆಚ್ಚಿನ ಸದಸ್ಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಪ್ರಸ್ತುತ, ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ತಮ್ಮ ಅಧಿಕಾರಾವಧಿಯಲ್ಲಿ ಒಂದು ವರ್ಷ ಉಳಿದಿತ್ತು.
ಜಯ್ ಶಾ (Jay Shah) 35ನೇ ವಯಸ್ಸಿಗೆ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಐಸಿಸಿ ಇತಿಹಾಸದಲ್ಲಿ ಅತ್ಯಂತ ಕಿರಿಯ ಅಧ್ಯಕ್ಷ ಎಂಬ ಖ್ಯಾತಿಗೆ ಭಾಜನರಾಗಲಿದ್ದಾರೆ. ಈ ಹಿಂದೆ ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್ ಐಸಿಸಿಯನ್ನು ಮುನ್ನಡೆಸಿದ ಭಾರತೀಯರು.
ಐಸಿಸಿ ಅಧ್ಯಕ್ಷರಾದ ಭಾರತೀಯರು:
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿ ಈವರೆಗೆ ನಾಲ್ವರು ಭಾರತೀಯರು ಕಾಣಿಸಿಕೊಂಡಿದ್ದಾರೆ. ಅವರೆಂದರೆ, ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್. ಇದೀಗ ಈ ಹುದ್ದೆಗೇರಿದ ಐದನೇ ಭಾರತೀಯನಾಗಿ ಜಯ್ ಶಾ ಹೊರಹೊಮ್ಮಿದ್ದಾರೆ. ಅದು ಸಹ ತಮ್ಮ 35ನೇ ವಯಸ್ಸಿನಲ್ಲಿ ಎಂಬುದು ವಿಶೇಷ.
ಜಯ್ ಶಾ 2019 ರಿಂದ ಬಿಸಿಸಿಐ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಮಹತ್ವದ ಬದಲಾವಣೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಷ್ಟೇ ಅಲ್ಲದೆ ಐಸಿಸಿ ಅಧ್ಯಕ್ಷ ಸ್ಥಾನಕ್ಕೇರುವ ಮುನ್ನ ದೇಶೀಯ ಕ್ರಿಕೆಟ್ ಆಡುವ ಭಾರತೀಯ ಆಟಗಾರರಿಗೆ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳೊಂದಿಗೆ ಬಹುಮಾನ ಮೊತ್ತ ನೀಡುವ ಪ್ರಮುಖ ನಿರ್ಧಾರವನ್ನು ಜಯ್ ಶಾ ಕೈಗೊಂಡಿದ್ದರು. ಇಂತಹ ಮಹತ್ವದ ನಿರ್ಧಾರಗಳೊಂದಿಗೆ ಭಾರತೀಯ ಕ್ರಿಕೆಟ್ನ ಉತ್ತೇಜನಕ್ಕೆ ಕಾರಣರಾಗಿರುವ ಜಯ್ ಶಾ ಅವರು ಇದೀಗ ಐಸಿಸಿ ಮುಖ್ಯಸ್ಥ ಸ್ಥಾನಕ್ಕೇರಿರುವುದರಿಂದ ಅವರ ಮೇಲಿನ ನಿರೀಕ್ಷೆಗಳು ಹೆಚ್ಚಾಗಿವೆ.
ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೇ ಜಯ್ ಶಾ ಸಂತಸ ಹಂಚಿಕೊಂಡಿದ್ದಾರೆ. ಬಿಸಿಸಿಐ ಕಾರ್ಯದರ್ಶಿಯಾಗಿ ಜವಬ್ದಾರಿ ನಿರ್ವಹಿಸಿದ ನನಗೆ ಇದೀಗ ಅತ್ಯುನ್ನತ ಜವಾಬ್ದಾರಿ ಹೆಗಲೇರಿದೆ. ಕ್ರಿಕೆಟ್‌ನನ್ನು ಮತ್ತಷ್ಟು ಜಾಗತಿಕ ಕ್ರೀಡೆಯನ್ನಾಗಿ ಮಾಡಲು ಶ್ರಮಿಸುತ್ತೇನೆ. ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ಸಮತೋಲನ ಕಾಪಾಡಿಕೊಳ್ಳುವುದು, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಕ್ರಿಕೆಟ್ ಮಾದರಿ ಕ್ರೀಡೆಯನ್ನಾಗಿ ಮಾಡುವುದು ಗುರಿಯಾಗಿದೆ. ಕ್ರಿಕೆಟ್ ಜನಪ್ರಿಯತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದೇ ಮೊದಲ ಗುರಿ ಎಂದು ಜಯ್ ಶಾ ಹೇಳಿದ್ದಾರೆ.
2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ ಮೂಲಕ ಕ್ರಿಕೆಟ್ ಮತ್ತಷ್ಟು ಜನಪ್ರಿಯಗೊಳ್ಳಲಿದೆ. ಹೆಚ್ಚಿನ ರಾಷ್ಟ್ರಗಳು ಐಸಿಸಿ ಟೂರ್ನಿ ಆಡುವ ಕಾಲ ದೂರವಿಲ್ಲ ಎಂದು ಜಯ್ ಶಾ ಹೇಳಿದ್ದಾರೆ.
ಐಸಿಸಿ ಚೇರ್ಮೆನ್ ಆದ 5ನೇ ಭಾರತೀಯ ಅನ್ನೋ ಹೆಗ್ಗಳಿಕೆಗೆ ಜಯ್ ಶಾ ಪಾತ್ರರಾಗಿದ್ದಾರೆ. ಜಯ್ ಶಾ ಮೊದಲು ಜಗ್‌ಮೋಹನ್ ದಾಲ್ಮೀಯ ಸೇರಿದಂತೆ ನಾಲ್ವರು ದಿಗ್ಗಜರು ಐಸಿಸಿ ಮುಖ್ಯಸ್ಥರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.
ಐಸಿಸಿ ಚೇರ್ಮೆನ್ ಆದ ಭಾರತೀಯರು
ಜಗ್‌ಮೋಹನ್ ದಾಲ್ಮಿಯ( 1997 ರಿಂದ 2000)
ಶರದ್ ಪವಾರ್ (2010 ರಿಂದ 2012)
ಎನ್ ಶ್ರೀನಿವಾಸನ್ (2014 ರಿಂದ 2015)
ಶಶಾಂಕ್ ಮನೋಹರ್( 2015 ರಿಂದ 2020)
ಜಯ್ ಶಾ ( 2024* )