ಏರ್ ಇಂಡಿಯಾ ಬಳಿಕ 500 ವಿಮಾನಗಳ ಖರೀದಿಗೆ IndiGo ಆರ್ಡರ್
ಮುಂಬೈ: ತನ್ನ ವ್ಯಾಪ್ತಿಯನ್ನು ಯುರೋಪ್‌ಗೆ ವಿಸ್ತರಿಸಲು ಟರ್ಕಿಶ್ ಏರ್‌ಲೈನ್ಸ್ (Turkish Airlines) ಸಹಭಾಗಿತ್ವದಲ್ಲಿ 500 ವಿಮಾನಗಳನ್ನ ಖರೀದಿಸಲು ಇಂಡಿಗೋ ಏರ್‌ಲೈನ್ಸ್ (IndiGo Airlines) ಆರ್ಡರ್ ಮಾಡಿದೆ ಎಂದು ಅಂತಾರಾಷ್ಟ್ರೀಯ ವ್ಯಾಪಾರ ಮುಖ್ಯಸ್ಥ ವಿನಯ್ ಮಲ್ಹೋತ್ರಾ ತಿಳಿಸಿದ್ದಾರೆ.
ಇದು ಭಾರತ-ಇಸ್ತಾಂಬುಲ್ (India-Istanbul) ಮತ್ತು ಯುರೋಪ್ (Europe) ನಡುವೆ ಪ್ರಯಾಣಿಸುವವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದೂ ಅವರು ಹೇಳಿದ್ದಾರೆ.
ಏರ್‌ಲೈನ್ಸ್ ಅಧಿಕಾರಿಗಳ ಪ್ರಕಾರ, ಇಂಡಿಗೋ ಯುರೋಪಿಯನ್ ದೈತ್ಯ ಏರ್‌ಬಸ್ ಹಾಗೂ ಯುಎಸ್ ಬೋಯಿಂಗ್ ಎರಡರಿಂದಲೂ ವಿಮಾನ ಖರೀದಿಗೆ ಮುಂದಾಗಿದೆ.
ಈ ಕುರಿತು ಮಾತನಾಡಿರುವ ಮಲ್ಹೋತ್ರಾ, ಇಂಡಿಗೋ ಪ್ರಸ್ತುತ 1,800 ವಿಮಾನಗಳನ್ನು ಹಾರಿಸುತ್ತಿದೆ. ಅವುಗಳಲ್ಲಿ 10 ಪ್ರತಿಶತದಷ್ಟು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಹಾರಾಟ ನಡೆಸುತ್ತಿವೆ. ವಿಸ್ತರಣಾ ಯೋಜನೆಗಾಗಿ ಇಂಡಿಗೋ ಇನ್ನೂ 500 ವಿಮಾನಗಳ ಖರೀದಿಗೆ ಆರ್ಡರ್ ಮಾಡಿದೆ. ಅದಕ್ಕಾಗಿ ಟರ್ಕಿಏರ್‌ಲೈನ್‌ನೊಂದಿಗೆ ಪಾಲುದಾರಿಕೆಗೆ ಮುಂದಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಇತ್ತೀಚೆಗೆ 470 ವಿಮಾನಗಳನ್ನು ಖರೀದಿಸಿದ ಏರ್ ಇಂಡಿಯಾ ಹೆಸರನ್ನು ಪ್ರಸ್ತಾಪಿಸದೇ ಮಾತನಾಡಿದ ಅವರು, ಸ್ಪರ್ಧೆಯನ್ನು ಯಾವಾಗಲೂ ಸ್ವಾಗತಿಸುತ್ತೇವೆ. ಭಾರತದಲ್ಲಿ ಪಾಸ್‌ಪೋರ್ಟ್ ಹೊಂದಿದವರು ವಿದೇಶಕ್ಕೆ ಹಾರಲು ಬಯಸುತ್ತಾರೆ. ಏಕೆಂದರೆ ಅವರಿಗೆ ದೊಡ್ಡ ಸಾಮರ್ಥ್ಯವಿದೆ. ಆದ್ದರಿಂದ ನಾವು ಭಾರತೀಯರನ್ನ ಗಡಿಯಾಚೆಗೆ ಕರೆದೊಯ್ಯಲು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಸ್ಥಳದಲ್ಲಿ ಇದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.