ಈಜುಕೊಳದಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಸಾವು
ಬೆಂಗಳೂರು (ಜ.31) : ಖಾಸಗಿ ಈಜುಕೊಳದಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಈಜು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜರಗನಹಳ್ಳಿ ನಿವಾಸಿಗಳಾದ ಜಯಂತ್ (13) ಮತ್ತು ಮೋಹನ್(13) ಮೃತ ದುರ್ದೈವಿಗಳು. ಸೋಮವಾರ ಮಧ್ಯಾಹ್ನ 1.30ರ ಸುಮಾರಿಗೆ ಜೆ.ಪಿ.ನಗರ 7ನೇ ಹಂತದ ಎಂಎನ್‌ಸಿ ಸ್ಪೋಟ್ಸ್‌ರ್ ಅಕಾಡೆಮಿಯ ಈಜುಕೊಳದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆ ಸಂಬಂಧ ಅಕಾಡೆಮಿಯ ಈಜು ತರಬೇತುದಾರ ಮೋಯಿನ್ ಎಂಬಾತನನ್ನು ಬಂಧಿಸಲಾಗಿದೆ. ಅಕಾಡೆಮಿಯ ನರೇಶ್ ಮತ್ತು ಶೇಖರ್‌ನನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಲಾಗಿದೆ.
ಈ ಇಬ್ಬರು ಬಾಲಕರು ನಗರದ ಜರಗನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಸೋಮವಾರ ಬೆಳಗ್ಗೆ ಶಾಲೆಗೆ ತೆರಳಿದ್ದಾರೆ. ಮಧ್ಯಾಹ್ನ ಶಾಲೆಯಿಂದ ಹೊರಬಂದು 1.30ರ ಸುಮಾರಿಗೆ ಈಜಲು ಎಂಎನ್‌ಸಿ ಸ್ಪೋಟ್ಸ್‌ರ್ ಅಕಾಡೆಮಿಗೆ ಬಂದಿದ್ದು, .100 ಪಾವತಿಸಿ ಈಜುಕೊಳಕ್ಕೆ ಪ್ರವೇಶ ಪಡೆದಿದ್ದಾರೆ. ಇಬ್ಬರು ಆರಂಭದಲ್ಲಿ ಆಳ ಕಡಿಮೆ ಇರುವ ಕಡೆ ಈಜಾಡಿದ ಬಳಿಕ ಹೆಚ್ಚು ಆಳವಿರುವ ಕಡೆಗೆ ಈಜಿಕೊಂಡು ಹೋಗಿದ್ದಾರೆ. ಆದರೆ ಸರಿಯಾಗಿ ಈಜು ಬಾರದೆ ನೀರಿನಲ್ಲಿ ಮುಳುಗಿದ್ದಾರೆ.
ಈ ವೇಳೆ ಈಜುಕೊಳದಲ್ಲಿ ಹೆಚ್ಚಿನ ಜನರು ಇರಲಿಲ್ಲ, ಹಾಗಾಗಿ ಬಾಲಕರು ನೀರಿನಲ್ಲಿ ಮುಳುಗಿದರೂ ಯಾರು ಗಮನಿಸಿಲ್ಲ. ತರಬೇತುದಾರ ಮೋಯಿನ್ ಈ ವೇಳೆ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಎನ್ನಲಾಗಿದೆ. ಕೆಲಹೊತ್ತಿನ ಬಳಿಕ ಈಜುಕೊಳದಲ್ಲಿ ಬಾಲಕರ ದೇಹಗಳು ನೀರಿನ ಮೇಲ್ಭಾಗಕ್ಕೆ ಬಂದಾಗ ಸ್ಥಳದಲ್ಲಿದ್ದ ಕೆಲವರು ಎಳೆದು ಮೇಲಕ್ಕೆ ತಂದಿದ್ದಾರೆ. ಈ ವೇಳೆ ಇಬ್ಬರು ಮೃತಪಟ್ಟಿರುವುದು ಗೊತ್ತಾಗಿದೆ.
ಬಾಲಕ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಕೋಣನಕುಂಟೆ ಠಾಣೆ ಪೊಲೀಸರು, ಮೃತದೇಹಗಳನ್ನು ಮುಂದಿನ ಪ್ರಕ್ರಿಯೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಈಜು ತರಬೇತುದಾರ ಮೋಯಿನ್‌ನನ್ನು ಬಂಧಿಸಲಾಗಿದೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.