ಇಟಲಿಯಲ್ಲಿ ದೋಣಿ ದುರಂತ – 40ಕ್ಕೂ ಹೆಚ್ಚು ವಲಸಿಗರ ದುರ್ಮರಣ

ರೋಮ್: ಇಲ್ಲಿನ ಕರಾವಳಿ ಪ್ರದೇಶದ ನಗರ ಕ್ರೋಟೋನ್‌ನಲ್ಲಿ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ದುರಂತಕ್ಕೀಡಾಗಿದ್ದು (Italy Boat Wreck), ಭಾರತ (India), ಪಾಕಿಸ್ತಾನ (Pakistan) ಹಾಗೂ ಅಫ್ಘಾನಿಸ್ತಾನದ 40ಕ್ಕೂ ಹೆಚ್ಚು ವಲಸಿಗರು (Migrants) ಸಾವನ್ನಪ್ಪಿರುವ ಘಟನೆ ನಡೆದಿದೆ.
120 ಮಂದಿಯನ್ನು ಹೊತ್ತ ದೋಣಿಯು ಭೀಕರ ಅಲೆಗಳ ಹೊಡೆತಕ್ಕೆ ಸಿಲುಕಿ, ತುಂಡು ತುಂಡಾಗಿದೆ. ದಡದಿಂದ ಕೆಲವು ಮೀಟರ್‌ಗಳ ಅಂತರದಲ್ಲೇ ಈ ಅವಘಡ ಸಂಭವಿಸಿದ್ದು, ಮಕ್ಕಳು ಸೇರಿದಂತೆ 40ಕ್ಕೂ ಹೆಚ್ಚು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಈಗಾಗಲೇ 43 ಮಂದಿಯ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ 24 ಮಂದಿ ಸಾವು: ದೋಣಿ ದುರಂತದಲ್ಲಿ ಪಾಕಿಸ್ತಾನದ 24ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಕಂಬನಿ ಮಿಡಿದಿದ್ದಾರೆ. ಅಲ್ಲದೇ ಇಟಲಿಯ ದೋಣಿ ದುರಂತದಲ್ಲಿ 24ಕ್ಕೂ ಹೆಚ್ಚು ಪಾಕಿಸ್ತಾನಿಯರು ಮುಳುಗಿ ಸಾವನ್ನಪ್ಪಿರುವುದು ಆತಂಕಕಾರಿ ಸಂಗತಿಯಾಗಿದೆ. ಆದಷ್ಟು ಬೇಗನೆ ಇರದ ಸತ್ಯಾಸತ್ಯತೆಗಳನ್ನು ಪತ್ತೆಹಚ್ಚುವಂತೆ ವಿದೇಶಾಂಗ ಕಚೇರಿಗೆ ನಿರ್ದೇಶನ ನೀಡುತ್ತೇನೆ ಎಂದು ಹೇಳಿದ್ದಾರೆ.
ಇಟಲಿ ಸರ್ಕಾರವು ಸಂಸತ್ತಿನಲ್ಲಿ ನಿನ್ನೆಯಷ್ಟೇ ವಲಸಿಗರ ರಕ್ಷಣೆಗಾಗಿ ಹೊಸ ಮಸೂದೆ ಮಂಡಿಸಿದ್ದು, ಅದರ ಬೆನ್ನಲ್ಲೇ ದೋಣಿ ಮುಳುಗಡೆ ನಡೆದಿದೆ.