ಆಘಾತಕಾರಿ ಘಟನೆ : 2 ತಿಂಗಳಲ್ಲಿ ಬಾಲಕನಿಗೆ 9 ಬಾರಿ ಕಡಿದ ಹಾವು!
ಹಾವಿನ ದ್ವೇಷ ಹನ್ನೆರೆಡು ವರ್ಷ ಅಂತಾರೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ಓರ್ವ ಬಾಲಕನಿಗೆ ಹಾವೊಂದು ಬೆಂಬಿಡದೆ ಕಾಡುತ್ತಿದೆ.ಹಲಕರ್ಟಿ ಗ್ರಾಮದ ವಿಜಯಕುಮಾರ್ ಮತ್ತು ಉಷಾ ದಂಪತಿಯ ಪುತ್ರ ಪ್ರಜ್ವಲ್ (15) ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ಈತನಿಗೆ ಎರಡು ತಿಂಗಳಲ್ಲಿ ಒಂದಲ್ಲ ಎರಡಲ್ಲ ಬರೊಬ್ಬರಿ ಒಂಬತ್ತು ಬಾರಿ ತನಗೆ ಹಾವು ಕಚ್ಚಿದೆ ಎಂದು ಪ್ರಜ್ವಲ್ ಹೇಳಿದ್ದಾನೆ.
ಪ್ರಜ್ವಲ್ಗೆ ಹಲಕರ್ಟಿ ಗ್ರಾಮದ ಮನೆಯಲ್ಲಿ ಜುಲೈ 3 ರಂದು ಮೊದಲ ಬಾರಿ ಹಾವು ಕಡಿದಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬ ಹಲಕರ್ಟಿ ಗ್ರಾಮ ಬಿಟ್ಟು ಚಿತ್ತಾಪುರ ತಾಲೂಕಿನ ವಾಡಿಯಲ್ಲಿ ವಾಸವಾಗಿದ್ದಾರೆ.
ವಾಡಿಯಲ್ಲಿ ಮನೆ ಮಾಡಿಕೊಂಡು ವಾಸ ಮಾಡುತ್ತಿರುವ ಸಂದರ್ಭದಲ್ಲೂ ಪ್ರಜ್ವಲ್ಗೆ ಮತ್ತೆ ಹಾವು ಕಡಿದಿದೆ. ಆದರೆ ಈ ಹಾವು ಮಾತ್ರ ಪೋಷಕರಿಗೆ, ಕುಟುಂಬಸ್ಥರಿಗೆ ಯಾರಿಗೂ ಕಾಣಿಸಿಕೊಂಡಿಲ್ಲ. ಪ್ರಜ್ವಲ್ ಕಣ್ಣಿಗೆ ಮಾತ್ರ ಕಾಣಿಸಿಕೊಳ್ಳುತ್ತಿದೆ.ಹಾವಿನಿಂದ ಒಂಬತ್ತು ಬಾರಿ ಕಡಿತಕ್ಕೆ ಒಳಗಾದಾಗ ಆರು ಬಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಮೂರು ಬಾರಿ ನಾಟಿ ಔಷಧದ ಚಿಕಿತ್ಸೆ ನೀಡಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ಬಳಿಕ ಎರಡ್ಮೂರು ದಿನದಲ್ಲೇ ಹಾವು ಮತ್ತೆ ಕಡೆಯುತ್ತಿದೆ. ಸದ್ಯ ಪ್ರಜ್ವಲ್ ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರಜ್ವಲ್ಗೆ ನಿಜವಾಗಿಯೂ ಹಾವು ಕಡಿಯುತ್ತಿದೆಯಾ ಎಂಬ ಕುತೂಹಲ ಹೆಚ್ಚಾಗಿದೆ. ಇನ್ನು ಪ್ರಜ್ವಲನ ಪೋಷಕರು ಈ ಹಾವಿನಿಂದ ಮುಕ್ತಿ ಕೊಡಿಸು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.