ಸಲ್ಮಾನ್ ಖಾನ್ ವಿರುದ್ಧದ ಕೇಸ್ ರದ್ದು ಮಾಡಿದ ಕೋರ್ಟ್
ಮುಂಬೈ: ಬಾಲಿವುಡ್ (Bollywood) ನಟ ಸಲ್ಮಾನ್ ಖಾನ್ (Salman Khan) ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು (Criminal Lawsuit) ಬಾಂಬೆ ಹೈಕೋರ್ಟ್ (High Court) ರದ್ದುಗೊಳಿಸಿದೆ. 2019ರಲ್ಲಿ ಪತ್ರಕರ್ತರೊಬ್ಬರು ಕ್ರಿಮಿನಲ್ ಬೆದರಿಕೆ ಆರೋಪದಲ್ಲಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಭಾರತಿ ಡಾಂಗ್ರೆ (Bharati Dangre) ನೇತೃತ್ವದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.
ಮುಂಬೈನ (Mumbai) ಬೀದಿಗಳಲ್ಲಿ ಸಲ್ಮಾನ್ ಖಾನ್ ಸೈಕ್ಲಿಂಗ್ ಮಾಡುತ್ತಿದ್ದ ವೇಳೆ ಪತ್ರಕರ್ತರೊಂದಿಗೆ ಜಗಳವಾಡಿ ಅವರ ಫೋನ್ ಕಸಿದುಕೊಂಡಿದ್ದರು ಎಂದು ಆರೋಪಿಸಿ ಪತ್ರಕರ್ತರೊಬ್ಬರು ದೂರು ನೀಡಿದ್ದರು. ದೂರಿನ ಅನ್ವಯ ನೀಡಲಾದ ಸಮನ್ಸ್ ಆದೇಶವನ್ನು ಪ್ರಶ್ನಿಸಿ ಸಲ್ಮಾನ್ ಖಾನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಈ ಮೊದಲು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಅಪರಾಧಗಳನ್ನು ಮಾಡಲಾಗಿತ್ತು. ಈ ಹಿನ್ನೆಲೆ ಸಲ್ಮಾನ್ ಖಾನ್ ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು.
ಈ ಆದೇಶಕ್ಕೆ ತಡೆ ನೀಡುವಂತೆ ಮತ್ತು ಪ್ರಕರಣವನ್ನು ರದ್ದು ಮಾಡುವಂತೆ ಸಲ್ಮಾನ್ ಖಾನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಖಾನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಬದ್ ಪೊಂಡಾ (Abad Ponda), ಪತ್ರಕರ್ತರು ತಮ್ಮ ಫೋಟೊ/ವೀಡಿಯೋ ಚಿತ್ರೀಕರಣ ಮಾಡದಂತೆ ತಡೆಯುವಂತೆ ತಮ್ಮ ಅಂಗರಕ್ಷಕರು ಕೇಳಿಕೊಂಡಿದ್ದರು. ಅದಾಗ್ಯೂ ಪೊಟೊ ವಿಡಿಯೋ ಚಿತ್ರಿಕರಣಕ್ಕೆ ಮುಂದಾದಾಗ ವಾಗ್ವಾದ ಏರ್ಪಟ್ಟಿತ್ತು ಎಂದು ಹೇಳಿದ್ದರು.