ಪ್ರಜ್ವಲ್ ರೇವಣ್ಣಗೆ ಶಾಕ್; ಜಾಮೀನು ಅರ್ಜಿ ವಜಾ!
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಶಾಕ್, (Prajwal Revanna) ಅವರ ನಿರೀಕ್ಷಣಾ ಜಾಮೀನು (Anticipatory Bail) ಅರ್ಜಿ ವಜಾಗೊಂಡಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಜಾಗೊಳಿಸಿ ಬುಧವಾರ ಆದೇಶ ಹೊರಡಿಸಿದೆ. ಅತ್ಯಾಚಾರ ಕೇಸ್ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಿ ಜಡ್ಜ್ ಸಂತೋಷ್ ಗಜಾನನ ಭಟ್ ವಜಾಗೊಳಿಸಿದ್ದಾರೆ.
ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಕೇಸ್ ದಾಖಲಾಗಿತ್ತು. ಇತ್ತೀಚೆಗೆ ಕೂಡ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆಗಲೂ ವಿಚಾರಣೆ ಮಾಡಿದ್ದ ಜಡ್ಜ್ ಸಂತೋಷ್ ಗಜಾನನ ಭಟ್ ಅರ್ಜಿಯನ್ನು ವಜಾಗೊಳಿಸಿದ್ದರು.
ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ನ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಆರೋಪ ಕೇಳಿಬರ್ತಿದ್ದಂತೆ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ನಂತ್ರ ಎಸ್ಐಟಿ ಮುಂದೆ ವಿಚಾರಣೆ ಎದುರಿಸಿದ್ದರು. ಬಳಿಕ ಪ್ರಜ್ವಲ್ನ ಕರ್ಮಕಾಂಡಗಳು ಚಾರ್ಜ್ಶೀಟ್ ಮೂಲಕ ಬಯಲಾಗಿವೆ. ತನಿಖೆ ಕೈಗೆತ್ತಿಕೊಂಡು ಎಸ್ಐಟಿ ಅಧಿಕಾರಿಗಳು 123 ಸಾಕ್ಷ್ಯಗಳನ್ನು ಸಂಗ್ರಹಿಸುವ ಮೂಲಕ ಸುಮಾರು 2 ಸಾವಿರ ಪುಟಗಳ ಚಾರ್ಜ್ಶೀಟ್ನ್ನು ಅಧಿಕಾರಿಗಳು ಸಲ್ಲಿಸಿದ್ದಾರೆ.
ಬಸವನಗುಡಿ ಮನೆಯಲ್ಲಿ ಪ್ರಜ್ವಲ್ ಅತ್ಯಾಚಾರ ಎಸಗಿದ್ದ. ಮನೆ ಕ್ಲೀನ್ ಮಾಡಲು ಬಂದಿದ್ದಾಕೆ ಮೇಲೆ ಎರಗಿದ್ದ. ಕ್ಲೀನ್ ಮಾಡಲೆಂದು ಮನೆಗೆ ಬಂದಿದ್ದ ಮಹಿಳೆ ಮೇಲೆ, ಭವಾನಿ ರೇವಣ್ಣ ಮನೆಯಲ್ಲಿ ಇಲ್ಲದಾಗ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರ ಬಳಿಕ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಯಾರಿಗೂ ಹೇಳದಂತೆ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದರಂತೆ. ಯಾರಿಗಾದ್ರೂ ಹೇಳಿದ್ರೆ ನಿನ್ನ ಪತಿಯನ್ನು ಜೈಲಿಗೆ ಕಳಿಸುವುದಾಗಿ ಬೆದರಿಸಿದ್ದರಂತೆ, ಇಷ್ಟೆ ಅಲ್ಲದೆ ಪ್ರಜ್ವಲ್, ಸಂತ್ರಸ್ತೆ ಮಗಳಿಗೂ ವಿಡಿಯೋ ಕರೆ ಮಾಡಿ ಲೈಂಗಿಕ ಕಿರುಕುಳ ಕೊಟ್ಟಿದ್ದ ಅನ್ನೋದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ನಟೋರಿಯಸ್ ಕ್ರಿಮಿನಲ್ ಬಚ್ಚಾ ಖಾನ್ ಬಂಧನ
ಹುಬ್ಬಳ್ಳಿ: ಸುಲಿಗೆ ಯತ್ನ ಪ್ರಕರಣದಲ್ಲಿ ನಟೋರಿಯಸ್ ಕ್ರಿಮಿನಲ್ ಬಚ್ಚಾಖಾನ್ ಮತ್ತು ಇತರ ಏಳು ಮಂದಿ ಸಹಚರರನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಬುಧವಾರ ತಿಳಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರನ್ನು ಸ್ಥಳಾಂತರಿಸಿದ ಬಳ್ಳಾರಿ ಜೈಲಿನಲ್ಲಿದ್ದ ನಟೋರಿಯಸ್ ಕ್ರಿಮಿನಲ್ ಬಚ್ಚಾಖಾನ್ ಪೆರೋಲ್ ಮೇಲೆ ಹೊರಗಿದ್ದು, ಇದೀಗ ಆತನನ್ನು ಬೆಂಗಳೂರಿನಲ್ಲಿ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 45 ದಿನಗಳ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದ ಬಚ್ಚಾ ಖಾನ್ ಸೇರಿದಂತೆ 8 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪ್ರದೇಶದ ಮಂಟೂರು ಗ್ರಾಮದ 70 ವರ್ಷದ ವ್ಯಕ್ತಿಯೊಬ್ಬರಿಗೆ ಆಗಸ್ಟ್ 18 ಮತ್ತು 20 ರ ನಡುವೆ ಎರಡು ಬಾರಿ ಫೋನ್ ಮಾಡಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಬಚ್ಚಾಖಾನ್ ಹಾಗೂ ಆತನ ಗ್ಯಾಂಗ್ ಹತ್ಯೆ ಬೆದರಿಕೆ ಹಾಕಿದೆ ಎಂದು ಶಶಿಕುಮಾರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ 2020ರಲ್ಲಿ ಫ್ರೂಟ್ ಇರ್ಫಾನ್ ಎಂಬುವವನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ರೌಡಿಗೆ ಶಿಕ್ಷೆ ವಿಧಿಸಲಾಗಿತ್ತು. ಹೀಗಾಗಿ ಜೈಲು ಸೇರಿದ್ದ ಈತ ಪೆರೋಲ್ ಮೇಲೆ ಹೊರಗಿದ್ದ. ಇದೀಗ ಮತ್ತೆ ಕೊಲೆ ಬೆದರಿಕೆ ಪ್ರಕರಣದಲ್ಲಿ ಜೈಲುಪಾಲಾಗಿದ್ದಾನೆ.
ನ್ಯಾಯಾಲಯದ ತೀರ್ಪು ಬರುವ ಮೊದಲು ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಬಿಎಸ್ವೈ
ಶಿವಮೊಗ್ಗ: ಮುಡಾ ಹಗರಣ (MUDA Scam) ಕುರಿತು ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಕೊಟ್ಟಿರುವ ಬಗ್ಗೆ ನ್ಯಾಯಾಲಯದ ತೀರ್ಪು ಬರುವ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಒಳ್ಳೆಯದು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಸಲಹೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ (Shivamogga) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪು ನೂರಕ್ಕೆ ನೂರು ಬರುತ್ತದೆ. ತೀರ್ಪು ಬಂದ ನಂತರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ. ಯಾಕೆಂದರೆ ಸಿಎಂ ಸಿದ್ದರಾಮಯ್ಯ ಮಾಡಿರುವ ಹಗರಣಗಳು ಸಾರ್ವಜನಿಕವಾಗಿದೆ ಎಂದರು.
ಯಾವುದೇ ಕಾರಣಕ್ಕೂ ಸಿದ್ದರಾಮಯ್ಯನವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಿಂತ ಮೊದಲೇ ಗೌರವಯುತವಾಗಿ ರಾಜೀನಾಮೆ ಕೊಡೋದು ಒಳ್ಳೆಯದು. ಅವರು ಮಾಡಿರುವ ಎಲ್ಲಾ ಹಗರಣ ಸಾಬೀತಾಗುತ್ತಿವೆ. ಮುಡಾ ಹಗರಣ ಜಗಜ್ಜಾಹೀರು ಆಗಿರುವ ಸಂಗತಿಯಾಗಿದೆ. ಬಿಜೆಪಿ ಸರ್ಕಾರದ ಅವಧಿಯ ಕೋವಿಡ್ ವರದಿ ವಿಚಾರದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸರ್ಕಾರಕ್ಕೆ ಸ್ವತಂತ್ರ ಇದೆ. ಯಾವುದೇ ತೀರ್ಮಾನ ತೆಗೆದುಕೊಳ್ಳಲಿ ಎಂದು ಹೇಳಿದರು.
ನಾವು ಯಾವುದೇ ಹೋರಾಟ ಮಾಡಲ್ಲ. ರಾಜ್ಯಪಾಲರು ಇನ್ನುಳಿದ ನಾಲ್ವರು ಸಚಿವರಿಗೆ ನೋಟಿಸ್ ಕೊಟ್ಟಿರುವ ವಿಚಾರದ ಬಗ್ಗೆ ಅವರು ಸರ್ವ ಸ್ವತಂತ್ರ ಇದ್ದಾರೆ. ಎಲ್ಲರಿಗೂ ನೋಟಿಸ್ ಕೊಟ್ಟಿದ್ದಾರೆ. ಏನು ಬೇಕಾದರೂ ತೀರ್ಮಾನ ತೆಗೆದುಕೊಳ್ಳಲಿ. ರಾಜ್ಯಪಾಲರು ನೋಟಿಸ್ ಕೊಟ್ಟಿದ್ದಾರೆ. ಏನು ಮಾಡುತ್ತಾರೋ ನೋಡೋಣ. ಸಿದ್ದರಾಮಯ್ಯ ಅವರ ತನಿಖೆ ಬಹುತೇಕ ಮುಗಿಯುವ ಹಂತ ತಲುಪಿದೆ. ಅವರು ರಾಜೀನಾಮೆ ಕೊಡಬೇಕಾಗುತ್ತದೆ ಎಂದರು.