ಪೆಪ್ಸಿಯಿಂದ ಹೊಸ ಲೋಗೋ ಅನಾವರಣ
ನವದೆಹಲಿ: ಬೇಸಿಗೆಯಲ್ಲಿ ಬಿಸಿಲ ಧಗೆಯಿಂದ ಪಾರಾಗಿ ಕೂಲ್‌ಕೂಲ್ ಆಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಮಜ್ಜಿಗೆ, ಪಾನಕ, ಕೂಲ್‌ಡ್ರಿಂಕ್ಸ್, ಐಸ್‌ಕ್ರೀಂ ಮೊದಲಾದವುಗಳನ್ನು ತಿನ್ತಾರೆ. ಕೂಲ್ ಡ್ರಿಂಕ್ಸ್ ಅಂದ್ರೆ ತಕ್ಷಣಕ್ಕೆ ನೆನಪಾಗೋದು ಪೆಪ್ಸಿ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಬಹುತೇಕರ ಫೇವರಿಟ್. ಪೆಪ್ಸಿಯ ನಂತರ ಅದೆಷ್ಟೇ ಹೊಸ ಕೂಲ್‌ಡ್ರಿಂಕ್ಸ್ ಬಂದರೂ ಜನರು ಪೆಪ್ಸಿಯನ್ನೇ ಹೆಚ್ಚು ಇಷ್ಟಪಡುತ್ತಾರೆ. ಮದುವೆ ಮನೆ, ಫಂಕ್ಷನ್, ಮೀಟಿಂಗ್ ಹೀಗೆ ಹಲವೆಡೆ ಪೆಪ್ಸಿಯನ್ನೇ ವಿತರಿಸುತ್ತಾರೆ. ಸದ್ಯ ಈ ಎಲ್ಲರ ಫೇವರಿಟ್ ತಂಪುಪಾನೀಯ ದಿಗ್ಗಜ ಪೆಪ್ಸಿ ತನ್ನ ಹೊಸ ಲೋಗೋವನ್ನು ಬಿಡುಗಡೆ ಮಾಡಿದೆ.
125 ನೇ ವಾರ್ಷಿಕೋತ್ಸವದ ಪ್ರಯುಕ್ತ ಪೆಪ್ಸಿಯ ಹೊಸ ಲೋಗೋ
125 ನೇ ವಾರ್ಷಿಕೋತ್ಸವವನ್ನು ಶೀಘ್ರದಲ್ಲೇ ಆಚರಿಸುವ ಸಂಭ್ರಮದಲ್ಲಿರುವ ಕಂಪೆನಿ ಹೊಸ ಲೋಗೋವನ್ನು ಅನಾವರಣಗೊಳಿಸಿದೆ. ಬರೋಬ್ಬರಿ 15 ವರ್ಷಗಳ ಬಳಿಕ ಹೊಸ ಲೋಗೋ ಹೊರ ಬರುತ್ತಿದೆ. ಪೆಪ್ಸಿ ತನ್ನ ಟ್ರೇಡ್‌ಮಾರ್ಕ್ ಕೆಂಪು ಮತ್ತು ನೀಲಿ ಬಣ್ಣಗಳ ಹಿನ್ನೆಲೆಯಲ್ಲಿ ಹೊಸ ಫಾಂಟ್‌ಗಳಲ್ಲಿರುವ ಪೆಪ್ಸಿ ಎಂಬ ಹೆಸರನ್ನು ಬೋಲ್ಡ್ ಫಾಂಟ್‌ಗಳಲ್ಲಿ ಬರೆಯಲಾಗಿದ್ದು, ಸಣ್ಣ ಅಕ್ಷರದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಎಂದು ಬರೆಯಲಾಗಿದೆ. ನೂತನ ಲೋಗೋದ ಚಿತ್ರವನ್ನು ಪಾಪ್ ಬೇಸ್ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಹೊಸ ಲೋಗೋ ಆಕರ್ಷಕವಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.
ಪೆಪ್ಸಿಕೋ ಮುಖ್ಯ ವಿನ್ಯಾಸ ಅಧಿಕಾರಿ ಮೌರೊ ಪೊರ್ಸಿನಿ, ಕಂಪೆನಿಯ ಲೋಗೋ ಹೆಚ್ಚಿನ ಶಕ್ತಿ, ಆತ್ಮವಿಶ್ವಾಸ ಹಾಗೂ ಧೈರ್ಯವನ್ನು ನೀಡಲು ಮರು ವಿನ್ಯಾಯಗೊಳಿಸಲಾಗಿದೆ ಎಂದರು. ಲೋಗೋವನ್ನು ಈ ವರ್ಷ ಉತ್ತರ ಅಮೆರಿಕದಲ್ಲಿ ಹಾಗೂ ಮುಂದಿನ ವರ್ಷದಿಂದ ಜಗತ್ತಿನಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ. ಪೆಪ್ಸಿಯ ಈ ನೂತನ ಲೋಗೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವು ಹೊಸ ಬದಲಾವಣೆ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಸ್ತುತ ಇರುವ ಪೆಪ್ಸಿ ಲೋಗೋವನ್ನು 2008ರಲ್ಲಿ ವಿನ್ಯಾಸಗೊಳಿಸಲಾಗಿತ್ತು.
ಪೆಪ್ಸಿಕೋ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಹೊಸ ಪೆಪ್ಸಿ ಲೋಗೋವನ್ನು ಮೊದಲು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ನೀಲಿ ಮತ್ತು ಕಪ್ಪು ಕ್ಯಾನ್‌ಗಳಲ್ಲಿ ಬಳಸಲಾಗುವುದು. ಇದಕ್ಕಾಗಿಯೇ ಅಲ್ಲಿ ಮಾರ್ಕೆಟಿಂಗ್ ಕೂಡಾ ಮಾಡಲಾಗುತ್ತಿದೆ. ನಂತರ 2024ರಲ್ಲಿ ಲೋಗೋವನ್ನು ಜಾಗತಿಕವಾಗಿ ಪರಿಚಯಿಸಲಾಗುವುದು ಎಂದು ತಿಳಿದುಬಂದಿದೆ.