ಟ್ವಿಟ್ಟರ್ನಂತೆ ಇನ್ನು ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲೂ ವೆರಿಫೈಡ್ ಖಾತೆಗಳಿಗೆ ದುಡ್ಡು ಪಾವತಿಸಬೇಕು

ವಾಷಿಂಗ್ಟನ್: ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ನಂತೆ (Twitter) ಇದೀಗ ಮೆಟಾ (Meta) ಕೂಡಾ ತನ್ನ ಫೋಟೋ ಹಂಚಿಕೆ ಅಪ್ಲಿಕೇಶನ್ಗಳಾದ ಇನ್ಸ್ಟಾಗ್ರಾಮ್ (Instagram) ಹಾಗೂ ಫೇಸ್ಬುಕ್ಗಳಲ್ಲಿ (Verified Account) ವೆರಿಫೈಡ್ ಖಾತೆಗಳಿಗಾಗಿ ಪಾವತಿ ಮಾಡುವ ಯೋಜನೆಯನ್ನು ಘೋಷಿಸಿದೆ.
ಕೆಲ ತಿಂಗಳ ಹಿಂದೆ ಟ್ವಿಟ್ಟರ್ ತನ್ನ ಬಳಕೆದಾರರು ನೀಲಿ ಬಣ್ಣದ ಟಿಕ್ ಮಾರ್ಕ್ಗಳನ್ನು (Blue Tick) ಹೊಂದಲು ಪಾವತಿ ಮಾಡುವ ನಿಯಮವನ್ನು ಜಾರಿಗೊಳಿಸಿತ್ತು. ಇತ್ತೀಚೆಗಷ್ಟೇ ಈ ನಿಯಮ ಭಾರತದಕ್ಕೂ ಬಂದಿದೆ. ಇದೀಗ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ಗಳಲ್ಲಿ ವೆರಿಫೈಡ್ ಖಾತೆಗಳಿಗಾಗಿ ಪಾವತಿ ಮಾಡಬೇಕೆಂದು ಮಾತೃ ಸಂಸ್ಥೆಯಾದ ಮೆಟಾ ತಿಳಿಸಿದೆ.
ಮೆಟಾ ಈ ಯೋಜನೆಯನ್ನು ಇದೇ ವಾರದಲ್ಲಿ ಜಾರಿಗೊಳಿಸುವುದಾಗಿ ತಿಳಿಸಿದೆ. ಆರಂಭದಲ್ಲಿ ಈ ಸೇವೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ನಲ್ಲಿ ಆರಂಭವಾಗಲಿದ್ದು, ಬಳಿಕ ಶೀಘ್ರದಲ್ಲೇ ಇತರ ದೇಶಗಳಿಗೂ ವಿಸ್ತರಿಸಲಿದೆ.
ಮೆಟಾ ವೆರಿಫೈಡ್ ಖಾತೆಗಳನ್ನು ಹೊಂದಲು ವೆಬ್ನಲ್ಲಿ ತಿಂಗಳಿಗೆ 11.99 ಡಾಲರ್ (991 ರೂ.) ಇರಲಿದ್ದು, ಐಒಎಸ್ ಬಳಕೆದಾರರಿಗೆ 14.99 ಡಾಲರ್ (1,239 ರೂ.) ಇರಲಿದೆ. ಆದರೆ ಆಂಡ್ರಾಯ್ಡ್ ಬಳಕೆದಾರರಿಗೆ ಈ ಚಂದಾದಾರಿಕೆ ಸೇವೆ ಲಭ್ಯವಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಪಾವತಿ ಮಾಡಿ ಚಂದಾದಾರಿಕೆ ಸೇವೆಯನ್ನು ಪಡೆಯಲು ಆಂಡ್ರಾಯ್ಡ್ ಬಳಕೆದಾರರು ಸ್ವಲ್ಪ ಕಾಯಬೇಕಾದ ಸಾಧ್ಯತೆಯಿದೆ.
ಈ ಯೋಜನೆ ಜಾರಿಯಾದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಕಂಟೆಂಟ್ ಕ್ರಿಯೇಟರ್ಗಳು ಪಾವತಿ ಮಾಡಿ ತಮ್ಮ ಖಾತೆಗಳಲ್ಲಿ ನೀಲಿ ಬಣ್ಣದ ಬ್ಯಾಡ್ಜ್ ಅನ್ನು ಪಡೆಯಬಹುದು. ಮಾಸಿಕ ಪ್ರೀಮಿಯಂ ಪಾವತಿಸುವ ಮೂಲಕ ತಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳಬಹುದು. ಈ ಸೇವೆ ಟ್ವಿಟ್ಟರ್ನ ಬ್ಲೂ ಟಿಕ್ ಅನ್ನೇ ಹೋಲುತ್ತದೆ.
ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿಸಿದ ಬಳಿಕ ಅದರಲ್ಲಿ ಪಾವತಿ ಮಾಡಿ ನೀಲಿ ಟಿಕ್ ಮಾರ್ಕ್ ಅನ್ನು ಪಡೆಯುವ ನೀತಿಯನ್ನು ಜಾರಿಗೊಳಿಸಿದರು. ಇದೀಗ ಟ್ವಿಟ್ಟರ್ನಲ್ಲಿ ನೀಲಿ ಟಿಕ್ ಪಡೆಯಲು ಬಳಕೆದಾರರು ವೆಬ್ಗಾಗಿ ತಿಂಗಳಿಗೆ 650 ರೂ., ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗೆ 900 ರೂ. ನಿಗದಿಪಡಿಸಲಾಗಿದೆ.