ಬೈಕ್‌ನಲ್ಲಿ ರಾಂಚಿ ಸ್ಟೇಡಿಯಂನಿಂದ ಬಿಂದಾಸ್ ಆಗಿ ಹೊರಟ ಎಂ ಎಸ್ ಧೋನಿ..! ವಿಡಿಯೋ ವೈರಲ್
ರಾಂಚಿ(ಫೆ.07): ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಬೈಕ್‌ಗಳೆಂದರೆ ಅಚ್ಚುಮೆಚ್ಚು ಎನ್ನುವ ವಿಚಾರ ಈಗೇನು ಗುಟ್ಟಾಗಿ ಉಳಿದಿಲ್ಲ. ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ, ಈಗಾಗಲೇ ಹಲವಾರು ಪ್ರಖ್ಯಾತ ಬೈಕ್ ರೈಡಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಧೋನಿ ಕ್ಲಾಸಿಕ್ ಬೈಕ್‌ಗಳಿಂದ ಹಿಡಿದು, ಸೂಪರ್‌ಬೈಕ್‌ಗಳವರೆಗೂ ಎಲ್ಲವನ್ನೂ ಒಂದು ಕೈ ನೋಡಿದ್ದಾರೆ. ಇದೀಗ ಎಂ ಎಸ್ ಧೋನಿ, ರಾಂಚಿ ಸ್ಟೇಡಿಯಂನಲ್ಲಿ ಟಿವಿಎಸ್ ಕಂಪನಿಯ ಅಪಾಚೆ ಆರ್‌ಆರ್310 ಬೈಕ್ ಓಡಿಸಿ ಗಮನ ಸೆಳೆದಿದ್ದಾರೆ.
ಹೌದು, ಮುಂಬರುವ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಸಿದ್ದತೆಯಲ್ಲಿರುವ ಮಹೇಂದ್ರ ಸಿಂಗ್ ಧೋನಿ, ಇದೀಗ ಭರ್ಜರಿಯಾಗಿಯೇ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಅಭ್ಯಾಸ ಮುಗಿಸಿದ ಧೋನಿ, ದುಬಾರಿ ಹೆಲ್ಮೆಟ್ ಧರಿಸಿ, ಅಪಾಚೆ ಆರ್‌ಆರ್310 ಬೈಕ್‌ನಲ್ಲಿ ಬಿಂದಾಸ್ ಆಗಿಯೇ ರೈಡ್ ಮಾಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಮುಂಬರುವ 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿಯೇ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಸಿಎಸ್‌ಕೆ ಫ್ರಾಂಚೈಸಿ ಕಾಶಿ ವಿಶ್ವನಾಥನ್ ಸ್ಪಷ್ಟಪಡಿಸಿದ್ದಾರೆ. ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 4 ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಧೋನಿ ಬಹುತೇಕ ಕೊನೆಯ ಐಪಿಎಲ್ ಟೂರ್ನಿಯನ್ನಾಡಲು ಸಜ್ಜಾಗಿದ್ದು, ಚೆನ್ನೈನ ಚೆಪಾಕ್ ಮೈದಾನದಲ್ಲಿ ಅಬ್ಬರಿಸಲು ಎದುರು ನೋಡುತ್ತಿದ್ದಾರೆ.
ಅಪಾಚೆ RR310 ಬೈಕ್ ವಿಶೇಷತೆಗಳೇನು..?
ಭಾರತದ ಮೋಟರ್ ಬೈಕ್ ಮಾರುಕಟ್ಟೆಯಲ್ಲಿ Apache RR310 ಬೈಕ್ ಅತಿವೇಗದ ಆಕ್ಸಲರೇಟಿಂಗ್ ಬೈಕ್‌ಗಳಲ್ಲಿ ಒಂದು ಎನಿಸಿಕೊಂಡಿದೆ. ಈ Apache RR310 ಬೈಕ್, ವಿಶೇಷವಾಗಿ ಎಂಜಿನ್ ಕಾನ್ಫಿಗರೇಷನ್ ಮೂಲಕವೇ ಹೆಚ್ಚು ಗಮನ ಸೆಳೆದಿದೆ. ಈ ಬೈಕ್ ಸ್ವಿಂಗ್ ಆರ್ಮ್ ವಿಶೇಷತೆಯನ್ನು ಹೊಂದಿದ್ದು, ಇದರ ಚಿಕ್ಕ ವೀಲ್ ಬೇಸ್, ಬೈಕ್ ವೇಗವಾಗಿ ರನ್ ಮಾಡಲು ನೆರವಾಗುತ್ತದೆ. ಈ Apache RR310 ಬೈಕ್‌ನಲ್ಲಿ 6 ಸ್ಪೀಡ್ ಟ್ರಾನ್ಸ್‌ಮಿಷನ್ ಇದ್ದು, ಕೇವಲ 7.17 ಸೆಕೆಂಡ್‌ಗಳಲ್ಲಿ ಗಂಟೆಗೆ 100 ಕಿಲೋ ಮೀಟರ್ ವೇಗವನ್ನು ತಲುಪಬಹುದಾಗಿದೆ.
ಎಂ ಎಸ್ ಧೋನಿ ಬಳಿಯಿವೆ ಹಲವಾರು ಬೈಕ್‌ಗಳು:
ಮೊದಲೇ ಹೇಳಿದಂತೆ ಮಹೇಂದ್ರ ಸಿಂಗ್ ಧೋನಿ, ಬೈಕ್ ಪ್ರೇಮಿಯಾಗಿದ್ದು, ಧೋನಿ ಬಳಿ ಎರಡು ಯಮಹಾ RD 350s, ಯಮಹಾ RX100, ಸುಜುಕಿ ಶೋಗನ್, ಹಾರ್ಲಿ ಡೆವಿಡ್‌ಸನ್ ಪ್ಯಾಟ್‌ಬಾಯ್, ಯಮಹಾ ಥಂಡರ್‌ಕ್ಯಾಟ್, ಬಿಎಸ್‌ಎ ಗೋಲ್ಡ್‌ಸ್ಟಾರ್, ನೊರ್ಟನ್ ಜೂಬ್ಲೀ 250, ಕಾಫೆಂಡರೇಟ್ ಹೆಲ್‌ಕ್ಯಾಟ್ X132, ಕವಾಸಕಿ ನಿಂಜಾ ZX-14R ಬೈಕ್‌ಗಳನ್ನು ಹೊಂದಿದ್ದಾರೆ.