ಹಾಲಿನಲ್ಲಿ ಇಲಿ ಪಾಷಾಣ ಬೆರೆಸಿ ಮಕ್ಕಳಿಗೆ ಕುಡಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ – ಮಗು ಸಾವು
ಹಾಸನ: ತಾಯಿಯೊಬ್ಬಳು ಹಾಲಿನಲ್ಲಿ ಇಲಿ ಪಾಷಾಣ ಬೆರೆಸಿ ಮಕ್ಕಳಿಗೆ ಕುಡಿಸಿ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನದ (Hassan) ಚಿಪ್ಪಿನಕಟ್ಟೆ ಬಡಾವಣೆಯಲ್ಲಿ ತಡವಾಗಿ ಬೆಳಕಿಗೆ ನಡೆದಿದೆ.
ವಿಷ ಕುಡಿದಿದ್ದ ಆರಾನ್ (7) ಸಾವನ್ನಪ್ಪಿದ್ದು, ಸುನೈನಾ (6) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ, ಜೀನತ್‌ಬಾನು ಜಿಲ್ಲಾಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದಾಳೆ. 12 ವರ್ಷಗಳ ಹಿಂದೆ ಹಾಸನದ ಚಿಪ್ಪಿನಕಟ್ಟೆಯ ದಿಲ್‌ದಾರ್ ಜೊತೆ ಮಂಗಳೂರಿನ ಉಪ್ಪಿನಂಗಡಿ ಬಳಿಯ ಸತ್ತಿಗಲ್ ಮೂಲದ ಜೀನತ್‌ಬಾನು ವಿವಾಹವಾಗಿತ್ತು. ಮದುವೆಯಾದಗಿನಿಂದಲೂ (Wedding) ಆಕೆಯ ಪೋಷಕರು ಜೀನತ್‌ಬಾನುಳನ್ನು ನೋಡಲು ಬಂದಿರಲಿಲ್ಲ. ಇದರಿಂದ ಮನನೊಂದಿದ್ದ ಜೀನತ್‌ಬಾನು ಹಾಲಿನಲ್ಲಿ ಇಲಿ ಪಾಷಾಣ ಬೆರಸಿ ತಾನು ಕುಡಿದು ಮಕ್ಕಳಿಗೆ ಕುಡಿಸಿದ್ದಾಳೆ. ವಿಷ ಉಣಿಸಿರುವ ಬಗ್ಗೆ ಪತಿ, ಅತ್ತೆ, ಮಾವನಿಗೆ ಜೀನತ್‌ಬಾನು ತಿಳಿಸಿರಲಿಲ್ಲ.
ಜ.8 ರಂದು ಬೆಳಿಗ್ಗೆ ಆರಾನ್‌ಗೆ ವಾಂತಿ ಭೇದಿಯಾಗಿದ್ದು, ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಆರಾನ್ ಸಾವನ್ನಪ್ಪಿದ್ದಾನೆ. ಆದರೂ ವಿಷ ಉಣಿಸಿರುವ ಬಗ್ಗೆ ತಾಯಿ (Mother) ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಫುಡ್ ಪಾಯ್ಸನ್‌ನಿಂದ ಮಗು ಮೃತಪಟ್ಟಿದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದರು. ನಂತರ ವಲ್ಲಭಭಾಯಿ ರಸ್ತೆಯಲ್ಲಿರುವ ಖಬ್ರಸ್ತಾನ್‌ನಲ್ಲಿ ಆರಾನ್ ಅಂತ್ಯಕ್ರಿಯೆ ನಡೆಸಲಾಗಿತ್ತು. ಇದಾದ ಬಳಿಕ ಸುನೈನಾ ಹಾಗೂ ಜೀನತ್‌ಬಾನುಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಈ ವೇಳೆ ವಿಷ ಉಣಿಸಿರುವ ಬಗ್ಗೆ ಜೀನತ್‌ಬಾನು ತನ್ನ ಪತಿ ಬಳಿ ಹೇಳಿದ್ದಾಳೆ.
ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೀನತ್‌ಬಾನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಸುನೈನಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹಾಸನ ತಹಸೀಲ್ದಾರ್ ಸಂತೋಷ್ ಸಮ್ಮುಖದಲ್ಲಿ ಹೂತಿದ್ದ ಆರಾನ್ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೀನತ್‌ಬಾನು ವಿರುದ್ಧ ಪ್ರಕರಣ ದಾಖಲಾಗಿದೆ.