ಹಾರ್ದಿಕ್ ಪಾಂಡ್ಯಾ ಮತ್ತು ನತಾಶಾ ದಾಂಪತ್ಯ ಜೀವನದಲ್ಲಿ ಬಿರುಕು? ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾದ ಸುದ್ದಿ..!
ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ 2024ರ ಸಾಲು ಹೇಳಿಕೊಳ್ಳುವಂತ್ತಿಲ್ಲ. ಗಾಯದ ಸಮಸ್ಯೆ ಕಾರಣ ಈ ವರ್ಷ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಸಾಕಷ್ಟು ಸಮಯ ದೂರ ಉಳಿದಿದ್ದ ಹಾರ್ದಿಕ್, 17ನೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ಸಿಯೊಂದಿಗೆ ಕ್ರಿಕೆಟ್ ಅಂಗಣಕ್ಕೆ ಮರಳಿದ್ದರು. ಆದರೆ, ಅವರ ಕಮ್ಬ್ಯಾಕ್ ಹೇಳಿಕೊಳ್ಳುವಂತ್ತಿರಲಿಲ್ಲ. ಮುಂಬೈ ಇಂಡಿಯನ್ಸ್ ಪ್ಲೇ ಆಫ್ಸ್ ರೇಸ್ನಿಂದ ಹೊರಬಿದ್ದ ಮೊದಲ ತಂಡ ಎನಿಸಿಕೊಂಡ ಬೆನ್ನಲ್ಲೇ ಹಾರ್ದಿಕ್ ವ್ಯಾಪಕ ಟೀಕೆಗಳನ್ನು ಎದುರಿಸಬೇಕಾಯಿತು. ಈ ನಡುವೆ ಕ್ರಿಕೆಟ್ ಬದುಕು ಮಾತ್ರವಲ್ಲ ಆಲ್ರೌಂಡರ್ನ ವೈವಾಹಿಕ ಜೀವನ ಕೂಡ ಹದಗೆಟ್ಟಿದೆ ಎಂಬುದು ಇತ್ತೀಚಿನ ವರದಿಗಳ ಮೂಲಕ ಬೆಳಕಿಗೆ ಬಂದಿದೆ.
ಹೌದು, ಅವರ ಪತ್ನಿ ಸರ್ಬಿಯಾದ ನಟಿ ನತಾಶಾ ಸ್ಟಾನ್ಕೋವಿಕ್(Natasa Stankovic) ಅವರು ಪಾಂಡ್ಯ(Hardik Pandya & Natasa Stankovic) ಅವರಿಂದ ದೂರವಾಗಲು ಬಯಸಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹಾರ್ದಿಕ್ ಮತ್ತು ನತಾಶಾ ಕಳೆದ 2020ರಲ್ಲೇ ರಿಜಿಸ್ಟರ್ ರೀತಿಯಲ್ಲಿ ವಿವಾಹವಾಗಿದ್ದರು. ಈ ಜೋಡಿಗೆ ಒಬ್ಬ ಪುತ್ರನಿದ್ದಾನೆ. ಈತನ ಹೆಸರು ಅಗಸ್ತ್ಯ. ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್ಪುರದಲ್ಲಿ ಕ್ರಿಷ್ಚಿಯನ್ ಸಂಪ್ರದಾಯದಂತೆ ಹಾರ್ದಿಕ್ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇವರ ವಿವಾಹ ಸಮಾರಂಭದಲ್ಲಿ ಕೊಹ್ಲಿ-ಅನುಷ್ಕಾ, ರಾಹುಲ್-ಅಥಿಯಾ, ರಾಕಿಣಗ್ ಸ್ಟಾರ್ ಯಶ್ ಸೇರಿ ಹಲವು ಗಣ್ಯರೂ ಭಾಗಿಯಾಗಿದ್ದರು.
ಅಂದು ಗೌನ್ ರೀತಿಯ ಬಿಳಿ ಉಡುಗೆಯನ್ನುಟ್ಟ ನತಾಶಾ ಮತ್ತು ಕಪ್ಪು ಸೂಟ್ನಲ್ಲಿ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯಾ ವಿವಾಹ ವೇದಿಕೆಯ ಕಡೆ ಡ್ಯಾನ್ಸ್ ಮಾಡಿಕೊಂಡು ಬರುವ ವಿಡಿಯೋವೊಂದು ಭರ್ಜರಿ ಸದ್ದು ಮಾಡಿತ್ತು. ಇದೀಗ ಜೋಡಿ ಬೇರೆಯಾಗುತ್ತಿದ್ದಾರೆ ಎನ್ನಲಾಗಿದೆ. ಈ ಅನುಮಾನ ಹುಟ್ಟಿಕೊಳ್ಳಲು ಕಾರಣವೂ ಇದೆ.
ಹಾರ್ದಿಕ್ ಪಾಂಡ್ಯ ಕಳೆದ 2 ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ಪ್ರತಿ ಪಂದ್ಯದಲ್ಲಿಯೂ ನತಾಶಾ ಸ್ಟೇಡಿಯಂಗೆ ಬಂದು ಗಂಡನಿಗೆ ಬೆಂಬಲ ಸೂಚಿಸಿದ್ದರು. ಆದರೆ ಈ ಬಾರಿ ಮುಂಬೈ ತಂಡವನ್ನು ಮುನ್ನಡೆಸಿ ವೇಳೆ ಒಮ್ಮೆಯೂ ಕೂಡ ನತಾಶಾ ಪಂದ್ಯ ನೋಡಲು ಸ್ಟೇಡಿಯಂಗೆ ಬಂದಿರಲಿಲ್ಲ. ಇದೀಗ ನತಾಶಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಹೆಸರನ್ನು ಕೂಡ ಬದಲಿಸಿದ್ದಾರೆ ಹೀಗಾಗಿ ಈ ಜೋಡಿ ಬೇರ್ಪಡಲಿದ್ದಾರೆ ಎನ್ನಲಾಗಿದೆ.
ಹೌದು, ನತಾಶಾ ಸ್ಟಾಂಕೋವಿಕ್ ಪಾಂಡ್ಯ ಎಂದು ಇನ್ಸ್ಟಾಗ್ರಾಮ್ನಲ್ಲಿ ಹೆಸರನ್ನು ಹೊಂದಿದ್ದರು. ಆದರೆ, ಇದೀಗ ಪಾಂಡ್ಯ ಅವರ ಹೆಸರನ್ನು ತೆಗೆದುಹಾಕಿದ್ದಾರೆ. ಮಾರ್ಚ್ 4 ರಂದು ನತಾಶಾ ಅವರ ಹುಟ್ಟುಹಬ್ಬವಿತ್ತು ಮತ್ತು ಆ ದಿನ ಹಾರ್ದಿಕ್ ಕೂಡ ಯಾವುದೇ ಪೋಸ್ಟ್ ಹಾಕಿಲ್ಲ. ನತಾಶಾ ಅವರು ಅಗಸ್ತ್ಯನೊಂದಿಗೆ ಇರುವ ಪೋಸ್ಟ್ ಹೊರತುಪಡಿಸಿ ತನ್ನ ಮತ್ತು ಹಾರ್ದಿಕ್ ಜತೆಗಿರುವ ಇತ್ತೀಚಿನ ಎಲ್ಲ ಪೋಸ್ಟ್ಗಳನ್ನು ತೆಗೆದುಹಾಕಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಹಾರ್ದಿಕ್ ಮತ್ತು ನತಾಶಾ ನಡುವೆ ಬಿರುಕು ಮೂಡಿರುವುದು ನಿಜ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ರೋಹಿತ್ ಶರ್ಮಾರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿ ತಾವೇ ತಂಡ ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಈ ಬಾರಿ ಅಭಿಮಾನಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಜತೆಗೆ ಪಾಂಡ್ಯ ಕೆಟ್ಟ ನಾಯಕತ್ವದಿಂದ ಮುಂಬೈ ಹಿಂದೆದು ಕಾಣದ ಘೋರ ವೈಫಲ್ಯ ಕಂಡಿತ್ತು ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಈ ಬಾರಿ ಆಡಿದ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಿಯಾಯಿತು.