ಸ್ಫೋಟಕ ಬಳಸಿ 450ಮೀ. ಉದ್ದದ 55 ವರ್ಷದ ಹಳೆಯ ಸೇತುವೆ ಧ್ವಂಸ ; ವಿಡಿಯೋ ವೈರಲ್

ಬರ್ಲಿನ್: ಜರ್ಮನಿಯಲ್ಲಿ 55 ವರ್ಷದಷ್ಟು ಹಳೆಯ ಸೇತುವೆಯೊಂದನ್ನು ಸ್ಫೋಟಕ ಬಳಸಿ ಧ್ವಂಸ ಮಾಡಲಾಗಿದ್ದು, ಈ ಕಾರ್ಯಾಚರಣೆಯ ರೋಚಕ ಕ್ಷಣ ಕ್ಯಾಮರಾದಲ್ಲಿ ಸೆರೆ ಆಗಿದ್ದು ವೈರಲ್ ಆಗಿದೆ. ಈ ಸೇತುವೆಯನ್ನು 1965 ಹಾಗೂ 1968ರ ಮಧ್ಯೆ ನಿರ್ಮಿಸಲಾಗಿತ್ತು. ಇತ್ತೀಚೆಗೆ ಸೇತುವೆ ಶಿಥಿಲಾವಸ್ಥೆಗೆ ತಲುಪಿದ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ಸೇತುವೆಯನ್ನು ಧ್ವಂಸ ಮಾಡಲಾಗಿದ್ದು, ಇದೇ ರೀತಿ ಹೊಸ ಸೇತುವೆ ನಿರ್ಮಿಸಲು ಐದು ವರ್ಷ ಹಿಡಿಯಬಹುದು ಎಂದು ಅಂದಾಜಿಸಲಾಗಿದೆ.
ವಾಹನ ಓಡಾಟಕ್ಕೆ ಬಳಸಲಾಗುತ್ತಿದ್ದ ಈ ಸೇತುವೆಯನ್ನು ನಿಯಂತ್ರಿತ ಸ್ಫೋಟಕ ಬಳಸಿ ಯಶಸ್ವಿಯಾಗಿ ಕೆಡವಲಾಗಿದ್ದು ಅಂದಾಜು 330 ಪೌಂಡ್ ಅಂದರೆ 150 ಕೇಜಿ ಸ್ಫೋಟಕವನ್ನು ಈ ಕಾರ್ಯಾಚರಣೆಗೆ ಬಳಸಲಾಗಿದೆ. ಮೇ 7 ರ ಭಾನುವಾರ ಈ ಕಾರ್ಯಾಚರಣೆ ನಡೆದಿದೆ. 150 ಕೇಜಿ ಸ್ಫೋಟಕ ಸ್ಫೋಟಗೊಳ್ಳುತ್ತಿದ್ದಂತೆ ಜರ್ಮನಿಯ ಲುಡೆನ್ಶೈಡ್ನಲ್ಲಿರುವ (Ludenscheid) 450 ಮೀಟರ್ ಉದ್ದದ ರಹ್ಮೆಡೆ ವ್ಯಾಲಿ ಸೇತುವೆ (Rahmede Valley Bridge) ಸೆಕೆಂಡುಗಳಲ್ಲಿ ಕುಸಿದು ಬಿದ್ದಿದೆ.
1965 ಮತ್ತು 1968 ರ ನಡುವೆ ನಿರ್ಮಿಸಲಾದ ಈ ಸೇತುವೆಯನ್ನು ಉರುಳಿಸಲು ಸುಮಾರು 330 ಪೌಂಡ್ ಸ್ಫೋಟಕಗಳು ಬೇಕಾಗಿದ್ದವು ಎಂದು ಇಂಡಿಪೆಂಡೆಂಟ್ ವರದಿ ಮಾಡಿದೆ. ಈ ಧ್ವಂಸ ಕಾರ್ಯಾಚರಣೆಯ ವೇಳೆ ಅಕ್ಕಪಕ್ಕದ ಕಟ್ಟಡಗಳನ್ನು ರಕ್ಷಿಸುವುದಕ್ಕಾಗಿ ತಡೆಗೋಡೆ ರಚಿಸಲು ಸುಮಾರು 50 ಜೋಡಿಸಲಾದ ಕಂಟೈನರ್ಗಳನ್ನು ಬಳಸಲಾಗಿತ್ತು. ಅಲ್ಲದೇ ಈ ಧ್ವಂಸದ ವೇಳೆ ಕಟ್ಟಡಗಳಿಗೆ ಹಾನಿಯಾಗದಂತೆ ತಡೆಯಲು ಹೆಚ್ಚುವರಿ ಸಾಧನಗಳನ್ನು ಕಿಟಕಿಗಳ ಮೇಲೆ ಜೋಡಿಸಲಾಗಿತ್ತು ಎಂದು ಇಂಡಿಪೆಂಡೆಂಟ್ ವರದಿ ಮಾಡಿದೆ.
VIDEO: Crowds gather to watch the demolition of German motorway bridge.
— AFP News Agency (@AFP) May 8, 2023
The A45 Rahmedetal motorway bridge had been closed to traffic since 2 December 2021 due to cracks and damage pic.twitter.com/VwYOTK7u07
ಶಿಥಿಲಗೊಂಡ ಸೇತುವೆಯು ಕೆಲವೇ ಸೆಕೆಂಡುಗಳಲ್ಲಿ ಕುಸಿಯುತ್ತಿರುವುದನ್ನು ಪ್ರತ್ಯಕ್ಷದರ್ಶಿಗಳು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸೇತುವೆ ಕುಸಿಯುತ್ತಿದ್ದಂತೆ, ದಟ್ಟವಾದ ಹೊಗೆಯಂತೆ ಕಾಣುವ ದಟ್ಟ ಧೂಳು ಮೋಡದಂತೆ ಮೇಲೆರುವುದು ಕಾಣಿಸುತ್ತಿದೆ. ಇದೇ ವೇಳೆ ಅಲ್ಲಿ ಸುರಕ್ಷಿತ ದೂರದಲ್ಲಿ ಸೇರಿದ್ದ ಜನ ಬೊಬ್ಬೆ ಹೊಡೆಯುತ್ತಾ ತಮ್ಮ ಫೋನ್ಗಳಲ್ಲಿ ಈ ಐತಿಹಾಸಿಕ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 2021ರ ಡಿಸೆಂಬರ್ನಿಂದ ಈ ಬ್ರಿಡ್ಜ್ನಲ್ಲಿ (Bridge) ಸಂಚಾರ ನಿಷೇಧಿಸಲಾಗಿತ್ತು. ಈಗ ಸೇತುವೆಯನ್ನು ಧ್ವಂಸಗೊಳಿಸಲಾಗಿದ್ದು (Demolished), ಜೂನ್ ಹತ್ತರ ಒಳಗಾಗಿ ಈ ಧ್ವಂಸಗೊಂಡ ಸೇತುವೆಯ ಅವಶೇಷಗಳನ್ನು ತೆರವು ಮಾಡಲಾಗುತ್ತದೆ. ಇಲ್ಲಿ ಹೊಸ ಸೇತುವೆಯನ್ನು ನಿರ್ಮಿಸಲು ಐದು ವರ್ಷಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.