‘ಸೆಲ್ಫೀ’ ಹೀನಾಯ ಸೋಲು; ಹೊಣೆ ಹೊತ್ತುಕೊಂಡ ಅಕ್ಷಯ್ ಕುಮಾರ್

ನಟ ಅಕ್ಷಯ್ ಕುಮಾರ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಿದ್ದರೂ ಕೂಡ ಅವರ ಸಿನಿಮಾಗಳು ಸೋಲುತ್ತಿವೆ. ಅಲ್ಲೊಂದು ಇಲ್ಲೊಂದು ಚಿತ್ರಗಳು ಸೋಲುವುದು ಸಹಜ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್ ಕುಮಾರ್ ನಟಿಸಿದ ಎಲ್ಲ ಚಿತ್ರಗಳೂ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಲು ವಿಫಲವಾಗುತ್ತಿವೆ. ಫೆಬ್ರವರಿ 24ರಂದು ಬಿಡುಗಡೆಯಾದ ‘ಸೆಲ್ಫೀ’ ಸಿನಿಮಾ ಕೂಡ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿದೆ. ಇದರಿಂದ ಅಕ್ಷಯ್ ಕುಮಾರ್ ಅವರ ಮಾರ್ಕೆಟ್ ಕುಸಿಯುವ ಅಪಾಯ ಎದುರಾಗಿದೆ. ಸಿನಿಮಾಗಳು ಸೋತಾಗ ಇತರರ ಮೇಲೆ ಗೂಬೆ ಕೂರಿಸುವವರೇ ಹೆಚ್ಚು. ಆದರೆ ಅಕ್ಷಯ್ ಕುಮಾರ್ ಹಾಗೆ ಮಾಡಿಲ್ಲ. ಸಿನಿಮಾದ ಸೋಲಿಗೆ ತಾವೇ ಮುಖ್ಯ ಕಾರಣ ಎಂದು ಅವರು ಒಪ್ಪಿಕೊಂಡಿದ್ದಾರೆ.
‘ಸೆಲ್ಫೀ’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ಇಮ್ರಾನ್ ಹಷ್ಮಿ ನಟಿಸಿದ್ದಾರೆ. ಈ ಚಿತ್ರಕ್ಕೆ ರಾಜ್ ಮೆಹ್ತಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಸೋಲಿನ ಹೊಣೆಯನ್ನು ಯಾರಿಗೂ ನೀಡದೇ ಎಲ್ಲವನ್ನೂ ತಮ್ಮ ಮೇಲೆ ಹಾಕಿಕೊಂಡಿದ್ದಾರೆ ಅಕ್ಷಯ್ ಕುಮಾರ್. ‘ಆಜ್ ತಕ್’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಅವರ ಹೇಳಿಕೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
‘ನನ್ನ ಸಿನಿಮಾಗಳು ಸತತ ಸೋಲುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ನನ್ನ 16 ಚಿತ್ರಗಳು ಸತತವಾಗಿ ಸೋತಿದ್ದವು. ಅಷ್ಟೇ ಅಲ್ಲ, ಒಂದು ಕಾಲದಲ್ಲಿ ನನ್ನ 8 ಸಿನಿಮಾಗಳು ಒಳ್ಳೆಯ ಕಲೆಕ್ಷನ್ ಮಾಡಲು ವಿಫಲವಾಗಿದ್ದವು. ನನ್ನದೇ ತಪ್ಪಿನಿಂದ ಇದೆಲ್ಲ ಆಗಿದೆ. ಪ್ರೇಕ್ಷಕರು ಬದಲಾಗಿದ್ದಾರೆ. ಅವರು ಬೇರೆ ಏನನ್ನೋ ಬಯಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ನಾವು ಬದಲಾಗಬೇಕು’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
‘ಇದೊಂದು ದೊಡ್ಡ ಎಚ್ಚರಿಕೆ ಗಂಟೆ. ಬದಲಾಗಲು ನಾನು ಪ್ರಯತ್ನ ಮಾಡುತ್ತಿದ್ದೇನೆ. ಅಷ್ಟನ್ನು ಮಾತ್ರ ನಾನು ಮಾಡಲು ಸಾಧ್ಯ. ಸಿನಿಮಾ ಸೋತಾಗ ಪ್ರೇಕ್ಷಕರನ್ನಾಗಲಿ ಅಥವಾ ಇನ್ಯಾರನ್ನೂ ದೂಷಿಸಬೇಡಿ. ಇದು ಸಂಪೂರ್ಣ ನನ್ನದೇ ತಪ್ಪು. ನನ್ನ ಆಯ್ಕೆ ತಪ್ಪಾಗಿರಬಹುದು’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
‘ಸೆಲ್ಫೀ’ ಸಿನಿಮಾ ಮೊದಲ ದಿನ (ಫೆ.24) ಗಳಿಸಿದ್ದು ಕೇವಲ 2.55 ಕೋಟಿ ರೂಪಾಯಿ. ಎರಡನೇ ದಿನವಾದ ಶನಿವಾರ ಆಗಿದ್ದು 3.80 ಕೋಟಿ ರೂಪಾಯಿ ಕಲೆಕ್ಷನ್. ಎರಡೂ ದಿನ ಗಳಿಕೆ ಸೇರಿಸಿದರೆ ಆಗುವುದು ಬರೀ 6.35 ಕೋಟಿ ರೂಪಾಯಿ. ಭಾನುವಾರವೂ ನಿರೀಕ್ಷಿತ ಮಟ್ಟದ ಏರಿಕೆ ಕಾಣುತ್ತಿಲ್ಲ. ಇದರಿಂದಾಗಿ ನಿರ್ಮಾಪಕರಿಗೆ ಸಖತ್ ನಷ್ಟ ಆಗಿದೆ. ಅಕ್ಷಯ್ ಕುಮಾರ್ ಅವರಂತಹ ಸ್ಟಾರ್ ನಟನ ಚಿತ್ರ ಇಷ್ಟು ಕಡಿಮೆ ಕಲೆಕ್ಷನ್ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
#Selfiee struggles on Day 2… The big jump - so essential after a disastrous start - is clearly missing… The poor biz continues to shock, sadden and demoralise the industry… Fri 2.55 cr, Sat 3.80 cr. Total: ₹ 6.35 cr+. #India biz. pic.twitter.com/1UDpVMbHsd
— taran adarsh (@taran_adarsh) February 26, 2023