ಸಿಎಂ ಬೊಮ್ಮಾಯಿ ಸ್ಪರ್ಧಿಸುವ ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೋಟೆಲ್ ಮೇಲೆ ಐಟಿ ದಾಳಿ!

ಹಾವೇರಿ: ಚುನಾವಣೆ ಹೊತ್ತಲ್ಲಿ ಐಟಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದು, ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿ ಸ್ಪರ್ಧಿಸುವ ಶಿಗ್ಗಾಂವಿ (Shiggaon) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೋಟೆಲ್ ಮೇಲೆ ಐಟಿ ಇಲಾಖೆ ದಾಳಿ ಮಾಡಿದೆ. ಬಂಕಾಪುರ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ (Yasir Khan Pathan) ಒಡೆತನದ ಗ್ರ್ಯಾಂಡ್ ಹೋಟೆಲ್ ಮೇಲೆ ಐಟಿ ಅಧಿಕಾರಿಗಳ ಕಣ್ಣು ಬಿದ್ದಿದೆ. ಸದ್ಯ ಗ್ರ್ಯಾಂಡ್ ಹೋಟೆಲ್ನಲ್ಲಿ ಐಟಿ ಅಧಿಕಾರಿಗಳ ತಂಡದಿಂದ ಪರಿಶೀಲನೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಇಂದು ಧಾರವಾಡ ಸೇರಿದಂತೆ ಬೆಂಗಳೂರು ನಗರದ 11 ಕ್ಷೇತ್ರಗಳಲ್ಲಿ ಐಟಿ ಅಧಿಕಾರಿಗಳು ಕಾರ್ಯಾಚರಣೆ ಮಾಡಿದ್ದು, ಕೋಟಿ ಕೋಟಿ ನಗದು ಸೀಜ್ ಮಾಡಿದ್ದಾರೆ.
ಬೆಂಗಳೂರಿನ ಹಲವು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಐಟಿ ಕಾರ್ಯಾಚರಣೆ ಮಾಡಿದ್ದು, ಸುಮಾರು 15.53 ಕೋಟಿ ರೂ, ನಗದು, ಹಾಗೂ 7 ಕೋಟಿ ಮೌಲ್ಯದ 10.14 ಕೆಜಿ ಚಿನ್ನಾಭರಣ ಸೀಜ್ ಮಾಡಲಾಗಿದೆ. ಶಿವಾಜಿನಗರ ವ್ಯಾಪ್ತಿಯಲ್ಲಿ 4.77, ಆರ್ಆರ್ ನಗರ ವ್ಯಾಪ್ತಿಯಲ್ಲಿ 3.44, ಮಲ್ಲೇಶ್ವರಂ ವ್ಯಾಪ್ತಿಯಲ್ಲಿ 3.35, ಪುಲಿಕೇಶಿನಗರ ವ್ಯಾಪ್ತಿಯಲ್ಲಿ 2.30 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ. ಅದೇ ರೀತಿಯಾಗಿ ಶಾಂತಿನಗರ ವ್ಯಾಪ್ತಿಯಲ್ಲಿ 62.83, ಗಾಂಧಿನಗರ ವ್ಯಾಪ್ತಿಯಲ್ಲಿ 55, ಹೆಬ್ಬಾಳ, ಶಿವಾಜಿನಗರ, ಚಿಕ್ಕಪೇಟೆ ಮತ್ತು ಜಯನಗರದಲ್ಲಿ 23.50 ಲಕ್ಷ ರೂ. ನಗದು ಸೀಜ್ ಮಾಡಲಾಗಿದೆ.
ಮತದಾನಕ್ಕೆ ಇನ್ನೂ ಎರಡು ದಿನಗಳಷ್ಟೇ ಬಾಕಿಯಿರುವಾಗ ಕ್ಷೇತ್ರಗಳಲ್ಲಿ ಹಣ, ಉಡುಗೊರೆಗಳ ಹಂಚಿಕೆ ಗುಮಾನಿ ನಡೆಯುತ್ತಿದ್ದು, ಈ ಬಗ್ಗೆ ಐಟಿ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದರೂ ಕೋಟಿ ಕೋಟಿ ಹಣ ಸೀಜ್ ಮಾಡಿದ್ದಾರೆ. ರಾಯಚೂರು ನಗರದ ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ 30 ಲಕ್ಷ ರೂ. ನಗದು, ಐದು ಕೋಟಿ ಮೌಲ್ಯದ ಚಿನ್ನವನ್ನು ಐಟಿ ಇಲಾಖೆ ಜಪ್ತಿ ಮಾಡಿದೆ.