ಸತತ ಎಂಟು ಬಾರಿ ಬಿಜೆಪಿಗೆ ಗೆಲುವು ತಂದುಕೊಟ್ಟಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸೌಮ್ಯ ರೆಡ್ಡಿ ವಿರುದ್ಧ ತೇಜಸ್ವಿ ಸೂರ್ಯಗೆ ಭರ್ಜರಿ ಗೆಲುವು.!
ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ (Bangalore South Lok Sabha MP Election 2024 Result) ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ (BJP Candidate Tejaswi Surya) 2ನೇ ಬಾರಿಗೆ ಗೆಲುವಿನ ಪತಾಕೆ ಹಾರಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಸೋಲು (Congress Candidate Soumya Reddy) ಕಂಡಿದ್ದಾರೆ. ಬಿಜೆಪಿ ಪಾಲಿಗೆ ಪ್ರತಿಷ್ಠಿತ ಕ್ಷೇತ್ರ ಎಂದೇ ಪರಿಗಣಿಸಲ್ಪಟ್ಟ ಬೆಂಗಳೂರು ದಕ್ಷಿಣದಲ್ಲಿ ಈ ಬಾರಿ ತೇಜಸ್ವಿ ಸೂರ್ಯ (Tejaswi Surya) ಅವರಿಗೆ ಎದುರಾಗಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ (Soumya Reddy) ಅವರನ್ನು ಕಣಕ್ಕಿಳಿಸಲಾಗಿತ್ತು. ಸತತ ಎಂಟು ಬಾರಿ ಬಿಜೆಪಿಗೆ ಗೆಲುವು ತಂದುಕೊಟ್ಟಿದ್ದ ಈ ಕ್ಷೇತ್ರದ ಫಲಿತಾಂಶದ ಬಿಜೆಪಿ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿತ್ತು.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ದುರ್ಬಲ ಎಂದಲ್ಲ. ಬಿಟಿಎಂ ಬಡಾವಣೆ, ಜಯನಗರ, ಗೋವಿಂದರಾಜನಗರ ಮುಂತಾದ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಪ್ರಬಲ ಹಿಡಿತ ಹೊಂದಿದ್ದಾರೆ. ಮಗಳು ಸೌಮ್ಯಾ ರೆಡ್ಡಿ ಗೆಲುವಿಗಾಗಿ ಅವರು ಶ್ರಮಿಸಿದ್ದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಮತ್ತು ಸೌಮ್ಯಾ ರೆಡ್ಡಿ ಅವರೊಂದಿಗೆ ಸ್ವತಂತ್ರ ಅಭ್ಯರ್ಥಿಗಳಾದ ಎ ರಾಜ್, ಅಸ್ಕರ್ ಎ ಮೋಹಿನ್, ಹರೀಶ್ ಗೌಡ, ಕೆಸಿ ಜನಾರ್ದನ್, ಕಾಂತಕುಮಾರ್ ಆರ್, ಆರ್.ಶೇಖರ್, ಕರ್ನಾಟಕ ರಾಷ್ಟ್ರೀಯ ಸಮಿತಿಯ ರಘುಪತಿ ಭಟ್, ಉತ್ತಮ ಪ್ರಜಾಕೀಯ ಪಕ್ಷದ ಬಾಲಕೃಷ್ಣ ಎಂ ಮುಂತಾದವರು ಸ್ಪರ್ಧೆಯಲ್ಲಿದ್ದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಪಡೆದ ತೇಜಸ್ವಿ ಸೂರ್ಯ ಪರಿಚಯ
ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ತೇಜಸ್ವಿ ಸೂರ್ಯ (ಎಲ್ ಸೂರ್ಯನಾರಾಯಣ ತೇಜಸ್ವಿ) ಅವರು ಮೊದಲ ಬಾರಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಗೆಲುವು ಪಡೆದರು. 1990ರ ನವೆಂಬರ್ 16ರಂದು ಜನಿಸಿದ ತೇಜಸ್ವಿಗೆ ಈಗ 33 ವರ್ಷ ವಯಸ್ಸು. ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್‌ನಿಂದ ಕಾನೂನು ಪದವಿ ಪಡೆದಿದ್ದಾರೆ. ಎಬಿವಿಪಿ ಸಕ್ರಿಯ ಕಾರ್ಯಕರ್ತರಾಗಿದ್ದ ತೇಜಸ್ವಿ ಸೂರ್ಯ, ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಬಿಜೆಪಿ ಡಿಜಿಟಲ್ ಕಮ್ಯುನಿಕೇಷನ್ಸ್ ತಂಡವನ್ನು 2014ರಲ್ಲಿ ಮುನ್ನಡೆಸಿ ಕೇಂದ್ರ ಬಿಜೆಪಿಯ ಗಮನ ಸೆಳೆದಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿಕೆ ಹರಿಪ್ರಸಾದ್ ಅವರನ್ನು 3,31,192 ಮತಗಳ ಅಂತರದಿಂದ ಸೋಲಿಸಿ ಅಭೂತಪೂರ್ವ ಗೆಲುವು ಪಡೆದು ಲೋಕಸಭೆಗೆ ಆಯ್ಕೆಯಾಗಿದ್ದರು.
ಚುನಾವಣಾ ಕಣ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ
ಬೆಂಗಳೂರು ದಕ್ಷಿಣ ಲೋಕಸಭಾ ಚುನಾವಣೆಯ ಇತಿಹಾಸ ಗಮನಿಸಿದರೆ ಸತತ ಏಳು ಬಾರಿ ಇಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಪಡೆದಿದೆ. ಜನತಾ ಪಕ್ಷ ಮೂರು ಬಾರಿ, ಕಾಂಗ್ರೆಸ್ ಎರಡು ಬಾರಿ ಗೆಲುವು ಪಡೆದಿದೆ. ದಕ್ಷಿಣ ಕ್ಷೇತ್ರದಲ್ಲಿ ಗೆಲುವು ಪಡೆಯಲು ಕಾಂಗ್ರೆಸ್ ಸಾಕಷ್ಟು ಪ್ರಯತ್ನಪಟ್ಟಿದೆ. ಈ ಹಿಂದಿನ ಪ್ರಯತ್ನಗಳು ಯಾವುದೂ ಫಲಿಸಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ ಎಲ್‌ಎಸ್ ಕಾಂಗ್ರೆಸ್‌ನ ಬಿಕೆ ಹರಿಪ್ರಸಾದ್ ವಿರುದ್ಧ ಗೆಲುವು ಪಡೆದಿದ್ದರು. ಈ ಸಮಯದಲ್ಲಿ ಬಿಜೆಪಿಗೆ 7,39,229 ಮತಗಳು ಮತ್ತು ಕಾಂಗ್ರೆಸ್‌ಗೆ 4,08,037 ಮತಗಳು ದೊರಕಿದ್ದವು. ಇದೇ ಸಮಯದಲ್ಲಿ 9,938 ನೋಟಾ ಮತಗಳೂ ಚಲಾವಣೆಯಾಗಿದ್ದವು.