ರೋಹಿತ್ ದಾಖಲೆ ಮುರಿದ ಹರ್ಮನ್‌ಪ್ರೀತ್ ಕೌರ್; 150 ಟಿ20 ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಕ್ರಿಕೆಟಿಗ!
ಹೊಸದಿಲ್ಲಿ: ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ನಡೆಯುತ್ತಿರುವ 2023ರ ಸಾಲಿನ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಟಿ20-ಐ ಕ್ರಿಕೆಟ್‌ನಲ್ಲಿ 150 ಪಂದ್ಯಗಳನ್ನು ಆಡುವ ಮೂಲಕ ಕೌರ್ ಈ ದಾಖಲೆ ಬರೆದಿದ್ದು, ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ(148 ಪಂದ್ಯ) ಅವರನ್ನು ಹಿಂದಿಕ್ಕಿದ್ದಲ್ಲದೆ, ಅತಿ ಹೆಚ್ಚು ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿದ ಕೀರ್ತಿಗೆ ಭಾಜನರಾಗಿದ್ದಾರೆ.
ಹರ್ಮನ್‌ಪ್ರೀತ್ ನಂತರ, ‘ಹಿಟ್‌ಮ್ಯಾನ್’ ರೋಹಿತ್ ಶರ್ಮಾ ಅವರ ಹೆಸರು ಹೆಚ್ಚು ಟಿ20ಐ ಪಂದ್ಯಗಳನ್ನು ಆಡಿದ ಕ್ರಿಕೆಟಿಗರ ಪಟ್ಟಿಯಲ್ಲಿದೆ. ಭಾರತೀಯ ಪುರುಷರ ಕ್ರಿಕೆಟ್ ತಂಡದ ನಿಯಮಿತ ನಾಯಕ ರೋಹಿತ್ ಇದುವರೆಗೆ 148 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರೆ, ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಸುಜಿ ಬೇಟ್ಸ್ 143 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
2009ರಲ್ಲಿ ಹರ್ಮನ್‌ಪ್ರೀತ್ ತನ್ನ T20 ಅಂತಾರಾಷ್ಟ್ರೀಯ ಪದಾರ್ಪಣೆ ಮಾಡಿದ್ದರು. ಅವರು ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಿದ್ದು ಕೇವಲ 8 ರನ್ ಗಳಿಸಿದರು. ಆದಾಗ್ಯೂ, ಹರ್ಮನ್‌ಪ್ರೀತ್ ಕಳಪೆ ಆರಂಭದ ಹೊರತಾಗಿಯೂ ಸಕಾರಾತ್ಮಕ ಮನೋಭಾವವನ್ನು ಉಳಿಸಿಕೊಂಡರು. ಟಿ20 ಮಾದರಿಯಲ್ಲಿ 149 ಪಂದ್ಯಗಳಲ್ಲಿ 27.97 ಸರಾಸರಿಯಲ್ಲಿ 2,993 ರನ್ ಗಳಿಸಿದ್ದರು. ಈ ಮಾದರಿಯಲ್ಲಿ ಅವರು ಒಂದು ಶತಕ ಮತ್ತು 9 ಅರ್ಧ ಶತಕಗಳನ್ನು ಗಳಿಸಿದ್ದಾರೆ.
ಇದೀಗ 150ನೇ ಪಂದ್ಯದಲ್ಲಿ ಹರ್ಮನ್‌ಪ್ರೀತ್ 13 ರನ್ ಬಾರಿಸುವ ಮೂಲಕ 3000 ರನ್‌ಗಳ ಗಡಿ ದಾಡಿಟ್ಟು ವಿಶ್ವದ ನಾಲ್ಕನೇ ಮಹಿಳಾ ಕ್ರಿಕೆಟಿಗರಾಗಿದ್ದಾರೆ.