ಮ್ಯೂಸಿಕ್ ಆ್ಯಪ್ ಸ್ಪಾಟಿಫೈ ಬಳಕೆದಾರರಿಗೆ ಬ್ಯಾಡ್ನ್ಯೂಸ್; ಕನ್ನಡ ಸೇರಿ ಎಲ್ಲಾ ಭಾಷೆಯ ಸಾವಿರಾರು ಹಾಡುಗಳು ಡಿಲೀಟ್
ಮ್ಯೂಸಿಕ್ ಆ್ಯಪ್ ಸ್ಪಾಟಿಫೈ (Spotify) ಬಳಕೆದಾರರು ಇತ್ತೀಚೆಗೆ ಸಮಸ್ಯೆ ಎದುರಿಸಿದ್ದಾರೆ. ಕನ್ನಡ, ಬಾಲಿವುಡ್ ಹಾಡುಗಳು ಅವರಿಗೆ ಕೇಳಲು ಸಿಗುತ್ತಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಧ್ವನಿ ಎತ್ತುತ್ತಿದ್ದಾರೆ. ಈ ರೀತಿ ಆಗುವುದಕ್ಕೂ ಒಂದು ಕಾರಣ ಇದೆ. ಇದನ್ನು ಕೆಲವರು ವಿವರಿಸಿದ್ದಾರೆ. ಸದ್ಯ ಆಗಿರುವ ಸಮಸ್ಯೆ ಬಗೆಹರಿದ ನಂತರದಲ್ಲಿ ಹಾಡುಗಳು ಮರಳಿ ಬರಲಿದೆ. ಅಲ್ಲಿಯವರೆಗೆ ಬಳಕೆದಾರರು ಕಾಯಲೇಬೇಕು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅನೇಕರು ಈ ಮ್ಯೂಸಿಕ್ ಆ್ಯಪ್ನ ಅನ್ಇನ್ಸ್ಟಾಲ್ ಮಾಡುವ ಬೆದರಿಕೆ ಹಾಕಿದ್ದಾರೆ.
ಜೀ ಮ್ಯೂಸಿಕ್ ಹಾಗೂ ಸ್ಪಾಟಿಫೈ ಮಧ್ಯೆ ಆಗಿರುವ ಒಪ್ಪಂದ ಮುಗಿದಿದೆ. ಹೊಸದಾಗಿ ಒಪ್ಪಂದ ಮಾಡಿಕೊಳ್ಳಬೇಕಿತ್ತು. ಆದರೆ, ಸ್ಪಾಟಿಫೈಗೆ ಇದು ಸಾಧ್ಯವಾಗಿಲ್ಲ. ಇದರಿಂದ ತಮ್ಮ ಸಂಸ್ಥೆಗೆ ಸೇರಿದ ಎಲ್ಲಾ ಹಾಡುಗಳನ್ನು ತೆಗೆದುಹಾಕುವಂತೆ ಜೀ ಸಂಸ್ಥೆ ಸ್ಪಾಟಿಫೈಗೆ ಆದೇಶ ನೀಡಿತ್ತು. ಇದರಿಂದ ಜೀ ಮ್ಯೂಸಿಕ್ ಹಾಗೂ ಜೀ ಎಂಟರ್ಟೇನ್ಮೆಂಟ್ನ ಎಲ್ಲಾ ಹಾಡುಗಳು ಸ್ಪಾಟಿಫೈ ಆ್ಯಪ್ನಿಂದ ಮಾಯ ಆಗಿದೆ.
ಕನ್ನಡದ ವೇದ, ಹಿಂದಿಯ ಫಿತೂರ್, ಉಡ್ತಾ ಪಂಜಾಬ್, ದಂಗಲ್, ಬರೇಲಿ ಕಿ ಬರ್ಫಿ, ಧಡಕ್, ಅಕ್ಟೋಬರ್, ಗಲ್ಲಿ ಬಾಯ್, ಕೇಸರಿ, ಕಾಲಾ ಚಶ್ಮಾ, ಕಳಂಕ್ ಮೊದಲಾದ ಹಾಡುಗಳನ್ನು ಡಿಲೀಟ್ ಮಾಡಲಾಗಿದೆ.
ಬಳಕೆದಾರರ ಆಕ್ರೋಶ
ಸದ್ಯ ಸ್ಪಾಟಿಫೈ ಬಳಕೆದಾರರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ಜಾಹೀರಾತಿನಿಂದ ಮುಕ್ತಿ ಪಡೆಯಲು ಸ್ಪಾಟಿಫೈ ಬಳಕೆದಾರರು ಹಣ ನೀಡುತ್ತಾರೆ. ಅಂಥ ಬಳಕೆದಾರರು ತಮ್ಮ ಚಂದಾದಾರತ್ವವನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಪರವಾನಿಗೆಯನ್ನು ಬೇಗನೇ ಮರಳಿ ಪಡೆಯುವ ಅಗತ್ಯ ಸಂಸ್ಥೆಗೆ ಎದುರಾಗಿದೆ.
ಇದು ತಾತ್ಕಾಲಿಕ
ಅಂದಹಾಗೆ ಒಪ್ಪಂದ ನವೀಕರಣಗೊಂಡ ನಂತರದಲ್ಲಿ ಜೀಗೆ ಸಂಬಂಧಿಸಿದ ಎಲ್ಲಾ ಹಾಡುಗಳು ಮರಳುತ್ತವೆ. ಬಾಲಿವುಡ್ನ ಸಾವಿರಾರು ಹಾಡುಗಳ ಹಕ್ಕು ಈ ಸಂಸ್ಥೆಯ ಅಡಿಯಲ್ಲಿ ಇದೆ. ಹೀಗಾಗಿ, ಸಾವಿರಾರು ಹಾಡುಗಳನ್ನು ಸ್ಪಾಟಿಫೈ ಬಳಕೆದಾರರಿಗೆ ಕೇಳಲು ಸಾಧ್ಯವಾಗುತ್ತಿಲ್ಲ.